×
Ad

FACT CHECK | ಪಾಕಿಸ್ತಾನದ ರಾಜಕಾರಣಿಯ AI ವೀಡಿಯೊ ಆಧರಿಸಿದ ಪೋಸ್ಟ್: ಕಿರಣ್ ರಿಜಿಜು ವಿರುದ್ಧ ವಿಪಕ್ಷಗಳ ವಾಗ್ದಾಳಿ

Update: 2025-08-03 15:08 IST

ಕಿರಣ್ ರಿಜಿಜು (Photo: PTI)

ಹೊಸದಿಲ್ಲಿ: ಪಾಕಿಸ್ತಾನದ ರಾಜಕಾರಣಿಯ AI ವೀಡಿಯೊ ಬಳಸಿ "ನಮ್ಮ ಜನರು ಭಾರತದ ಸಂಸತ್ತಿನಲ್ಲಿ ಕುಳಿತಿದ್ದಾರೆ" ಎಂದು ತಪ್ಪು ಮಾಹಿತಿ ಪ್ರಚಾರ ಮಾಡಿದ್ದಕ್ಕಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಈ ವಿಡಿಯೋವನ್ನು ಮೊದಲಿಗೆ ಬಿಜೆಪಿ ಐಟಿ ಸೆಲ್ ಸದಸ್ಯ ರಿಷಿ ಬಾಗ್ರಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿದ ಬಳಿಕ, ಅದನ್ನು ರಿಜಿಜು ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ರಿ ಪೋಸ್ಟ್ ಮಾಡಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಫ್ಯಾಕ್ಟ್-ಚೆಕಿಂಗ್ ವೆಬ್ ಸೈಟ್ ಆಲ್ಟ್ ನ್ಯೂಸ್‌ ನ ಸಹಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರು ಈ ವಿಡಿಯೋವನ್ನು AI ಆಧಾರಿತ ಎಂದು ಖಚಿತಪಡಿಸಿದ್ದಾರೆ.


"ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿ ಹರಡುತ್ತಿದ್ದಾರೆ" ಎಂದು AI ರಚಿತ ವಿಡಿಯೋ ಪುರಾವೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಇದೇ ವಿಡಿಯೋವನ್ನು ಸತ್ಯಾಸತ್ಯತೆಯನ್ನು ಯಾವುದೇ ಪರಿಶೀಲನೆ ಮಾಡದೆ ರಿಪಬ್ಲಿಕ್ ಟಿವಿಯು ಕೂಡ ಹಂಚಿಕೊಂಡಿದೆ.

ಸಂಸತ್ತಿನಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಆಪರೇಷನ್ ಸಿಂಧೂರದ ಕುರಿತ ಗಂಭೀರ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಸಚಿವಾಲಯದ ಸಚಿವ ಕಿರಣ್ ರಿಜಿಜು ಅವರಿಂದ AI ರಚಿತ ಪೋಸ್ಟ್ ಬಂದಿರುವುದು ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ರಿಜಿಜು ಅವರ ವಿರುದ್ಧ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರಿಂದ ತೀಕ್ಷ್ಣ ಟೀಕೆಗಳು ವ್ಯಕ್ತವಾಗಿವೆ. ಟಿಎಂಸಿ ಸಂಸದ ಸಾಕೇತ್ ಗೋಖಲೆ ಅವರು, "ಪಾಕಿಸ್ತಾನಿ ರಾಜಕಾರಣಿ ಅಮೆರಿಕ ಅಧ್ಯಕ್ಷನಿಗಿಂತ ವಿಶ್ವಾಸಾರ್ಹ ಎಂದು ಮೋದಿಯವರ ಸಚಿವರಿಗೆ ಅನ್ನಿಸುತ್ತಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಡೊನಾಲ್ಡ್ ಟ್ರಂಪ್ ನೀಡಿದ್ದ ಇತ್ತೀಚಿನ ಕದನ ವಿರಾಮ ಪ್ರಸ್ತಾಪವನ್ನು ಉಲ್ಲೇಖಿಸಿದ ಸಾಕೇತ್, "ಬಹುಶಃ ಭಾರತದ ಸಂಸತ್ತಿನಲ್ಲಿ ನಮ್ಮ ಜನರು ಎಂದು ಪಾಕಿಸ್ತಾನದ ಸಚಿವರು ಹೇಳಿದ್ದರ ಅರ್ಥ ಅದಾಗಿರಬಹುದು" ಎಂದರು.

ಕಾಂಗ್ರೆಸ್ ನಾಯಕ ಪವನ್ ಖೇರಾ ತೀವ್ರ ವಾಗ್ದಾಳಿ ನಡೆಸುತ್ತಾ, "ಕಿರಣ್ ರಿಜಿಜು ಅವರು ಬಿಜೆಪಿ ಐಟಿ ಸೆಲ್‌ನ ಮಾಳವೀಯ ಸ್ಥಾನಕ್ಕೆ ಆಡಿಷನ್ ನೀಡುತ್ತಿರುವಂತೆ ಕಾಣಿಸುತ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ. ನಿನ್ನೆಯಿಂದ ಅವರು ಕಡಿಮೆ ಐಕ್ಯೂ ಹೊಂದಿರುವ ಬಿಜೆಪಿ ಐಟಿ ಸೆಲ್ ನ ಸದಸ್ಯರೊಬ್ಬರು ಹಂಚಿಕೊಂಡ AI ತಂತ್ರಜ್ಞಾನದ ತಯಾರಾದ ತಿದ್ದುಪಡಿ ವಿಡಿಯೋವನ್ನು ಆಧರಿಸಿ ರಾಜಕೀಯ ಗಿಣಿ ಪಾಠ ಹೇಳುತ್ತಿದ್ದಾರೆ", ಎಂದು ಕಿಡಿಕಾರಿದ್ದಾರೆ.

ಆಪರೇಷನ್ ಸಿಂಧೂರ್ ಕಾರ್ಯಚರಣೆ ನಡುವೆ ವಿದೇಶಾಂಗ ಸಚಿವ ಎಸ್ ಜಯಶಂಕರ್ ಅವರು ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದರ ವಿವಾದವನ್ನು ಪವನ್ ಖೇರಾ ಉಲ್ಲೇಖಿಸಿದರು. "ಎಸ್. ಜೈಶಂಕರ್ ಅವರು ಆಪರೇಷನ್ ಸಿಂಧೂರ್‌ಗೆ ಮೊದಲು ಪಾಕಿಸ್ತಾನಕ್ಕೆ ಮಾಹಿತಿ ನೀಡಿದರು. ಅದು ಪ್ರಾರಂಭವಾದ 30 ನಿಮಿಷಗಳ ನಂತರ ಕದನ ವಿರಾಮಕ್ಕೆ ಕರೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ". ಈ ವಿವಾದದಿಂದ ಗಮನವನ್ನು ಬೇರೆಡೆ ಸೆಳೆಯಲು ಕಿರಣ್ ರಿಜಿಜು AI ಆಧಾರಿತ ನಕಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ರಿಜಿಜು ತಮ್ಮ ಮೂಲ ಟ್ವೀಟ್ ಅನ್ನು ಅಳಿಸಿಹಾಕಿದ ನಂತರ ಅದೇ ನಕಲಿ ವೀಡಿಯೊವನ್ನು ಮರು ಪೋಸ್ಟ್ ಮಾಡಿದ್ದಕ್ಕಾಗಿ ಪವನ್ ಖೇರಾ ಅವರು ಟೀಕಿಸಿದ್ದಾರೆ. ಇದೊಂದು ಶೋಚನೀಯ ಕ್ರಮ ಎಂದ ಪವನ್ ಖೇರಾ, ನೈಜ ಮತ್ತು ತಿರುಚಿದ ವಿಷಯಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವ ಸಚಿವರ ಸಾಮರ್ಥ್ಯವನ್ನು ಪ್ರಶ್ನಿಸಿದ್ದಾರೆ. "ಇಂತಹ ಶೂನ್ಯಕ್ಕಿಂತ ಕಡಿಮೆ ಐಕ್ಯೂ ಐಟಿ ಸೆಲ್‌ಗೆ ಮಾತ್ರ ಸೂಕ್ತವಾಗಿದೆ. ಈಗ ಬಹುಶಃ ಮೋದಿ ಅವರ ಸಂಪುಟಕ್ಕೂ ಸಹ ಸೂಕ್ತವಾಗಿದೆ" ಎಂದು ಖೇರಾ ಟೀಕಿಸಿದ್ದಾರೆ.

ಈ ಕಟ್ಟುಕತೆಯ ಕುರಿತಂತೆ ಈಗಾಗಲೇ ವರದಿಗಳನ್ನು ಮಾಡಲಾಗುತ್ತಿದೆ. ಖಂಡನೆ ವ್ಯಕ್ತವಾಗುತ್ತಿದೆ.ಆದರೂ, ಈ ಟ್ವೀಟ್ ಕುರಿತಂತೆ ರಿಪಬ್ಲಿಕ್ ಟಿವಿಯಾಗಲಿ ಅಥವಾ ಕಿರಣ್ ರಿಜಿಜು ಅವರಾಗಲೀ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News