ಜಮ್ಮು-ಕಾಶ್ಮೀರ | ಮೇಘ ಸ್ಫೋಟ: ಇನ್ನೂ ಪತ್ತೆಯಾಗದ 36 ಮಂದಿ, ಮುಂದುವರಿದ ಕಾರ್ಯಾಚರಣೆ
Photo : PTI
ಶ್ರೀನಗರ, ಆ. 22: ಜಮ್ಮು ಹಾಗೂ ಕಾಶ್ಮೀರದ ಕಿಸ್ತ್ವಾರದ ಪಡ್ಡಾರ್ ಪ್ರದೇಶದಲ್ಲಿರುವ ಚಶೋಟಿ ಗ್ರಾಮದಲ್ಲಿ ಆಗಸ್ಟ್ 13ರಂದು ಮೇಘ ಸ್ಫೋಟ ಸಂಭವಿಸಿದ ಬಳಿಕ ಉಂಟಾದ ದಿಢೀರ್ ಪ್ರವಾಹದ ಬಳಿಕ ಈಗಲೂ ನಾಪತ್ತೆಯಾದವರನ್ನು ಪತ್ತೆ ಹಚ್ಚಲು ಶೋಧ ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ.
ಮಚೈಲ್ ಮಾತಾ ಯಾತ್ರೆಯ ಸಂದರ್ಭ ಈ ದುರಂತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಇದುವರೆಗೆ ಸಿಐಎಸ್ಎಫ್ ನ ಮೂವರು ಸಿಬ್ಬಂದಿ ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ನ ಒಬ್ಬರು ವಿಶೇಷ ಪೊಲೀಸ್ ಅಧಿಕಾರಿ ಸೇರಿದಂತೆ 65 ಮಂದಿ ಸಾವನ್ನಪ್ಪಿದ್ದಾರೆ. 100ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.
ಸುಮಾರು 36 ಜನರ ಸುಳಿವು ಇನ್ನೂ ಸಿಕ್ಕಿಲ್ಲ. ಸತತ 8ನೇ ದಿನ ಕೂಡ ರಕ್ಷಣಾ ಕಾರ್ಯ ಮುಂದುವರಿದಿದೆ. ಸ್ಥಳದಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸೇನೆ, ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ಹಾಗೂ ಜಿಆರ್ಇಎಫ್ ಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿದೆ.
ಬೃಹತ್ ಬಂಡೆಗಳು ಹಾಗೂ ಭಗ್ನಾವಶೇಷಗಳಿಂದಾಗಿ ಶೋಧ ಕಾರ್ಯಾಚರಣೆ ದುಸ್ತರವಾಗಿದೆ. ಕಾರ್ಯಾಚರಣೆ ಮೂರು ಮುಖ್ಯ ನಿವೇಶನಗಳನ್ನು ಕೇಂದ್ರೀಕರಿಸಿದೆ. ಸಮುದಾಯ ಅಡುಗೆ ಮನೆ, ನೆರೆಯಿಂದ ಮನೆಗಳು ಕೊಚ್ಚಿಕೊಂಡು ಹೋದ ಸ್ಥಳ ಹಾಗೂ ಗುಲಾಬ್ಗಢದ ಭುವಾತ್ ನುಲ್ಲಾಹ್.
ಮೃತದೇಹಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ದೂಲ್ ಅಣೆಕಟ್ಟು ಹಾಗೂ ಚೇನಬ್ ನದಿಯಲ್ಲಿ ಕೂಡ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚೆಶೋಟಿ ನುಲ್ಲಾಹ್ ನಲ್ಲಿ ಸೇನಾ ಎಂಜಿನಿಯರ್ಗಳು ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದ್ದಾರೆ.
‘‘ನಾಪತ್ತೆಯಾದ ಮೃತದೇಹಗಳನ್ನು ಪತ್ತೆ ಹಚ್ಚಲು ಹಲವು ಸಂಸ್ಥೆಗಳ ಕಾರ್ಯಾಚರಣೆ ಮುಂದುವರಿಸಿವೆ. ಈಗ ನಾವು ಕೂಡ ಚೀನಾಬ್ ನದಿ ದಂಡೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಕಷ್ಟಪಟ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ, ನಾಪತ್ತೆಯಾದವರ ಮೃತದೇಹಗಳನ್ನು ಪತ್ತೆ ಹಚ್ಚಲು ಎಷ್ಟು ಸಮಯ ಬೇಕಾಗುತ್ತದೆ ಎಂದು ನಮಗೆ ಹೇಳಲು ಸಾಧ್ಯವಿಲ್ಲ’’ ಎಂದು ಕಿಸ್ತ್ವಾರದ ಉಪ ಆಯುಕ್ತ ಪಂಕಜ್ ಶರ್ಮಾ ತಿಳಿಸಿದ್ದಾರೆ.