×
Ad

‘ಎನ್‌ಸಿಆರ್-ಎಸ್‌ಐಆರ್’ ಆತಂಕ; ಕೋಲ್ಕತಾ ನಿವಾಸಿ ಆತ್ಮಹತ್ಯೆಗೆ ಶರಣು

Update: 2025-08-04 21:28 IST

ಕೋಲ್ಕತಾ,ಆ.4: ಬಾಂಗ್ಲಾದೇಶದಿಂದ 1972ರಲ್ಲಿ ತನ್ನ ಹೆತ್ತವರೊಂದಿಗೆ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿದ್ದ ಬಾಂಸದ್ರೋನಿ ನಿವಾಸಿಯೋರ್ವರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್‌ಆರ್‌ಸಿ ಮತ್ತು ಎಸ್‌ಐಆರ್(ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ) ಕುರಿತು ‘ತೀವ್ರ ಆತಂಕ’ ಅವರ ಆತ್ಮಹತ್ಯೆಗೆ ಕಾರಣವೆಂದು ಕುಟುಂಬವು ಆರೋಪಿಸಿದೆ.

ದಿಲೀಪ್ ಕುಮಾರ್ ಸಹಾ(63) ಮೃತವ್ಯಕ್ತಿ. ತನ್ನ ಕಿರಿಯ ಪುತ್ರ ಇತ್ತೀಚಿಗೆ ಬಾಂಗ್ಲಾದೇಶದಿಂದ ಕೋಲ್ಕತಾಕ್ಕೆ ಬಂದ ಬಳಿಕ ಅವರ ಆತಂಕ ಹೆಚ್ಚಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಸಹಾ ಕುಟುಂಬದ ಯಾವುದೇ ಸದಸ್ಯರು ಇತ್ತೀಚಿಗೆ ಬಾಂಗ್ಲಾದೇಶದಿಂದ ವಲಸೆ ಬಂದಿರುವುದನ್ನು ಪೋಲಿಸರು ನಿರಾಕರಿಸಿದ್ದಾರೆ.

ಸಹಾ ಅವರ ಮೃತದೇಹದ ಬಳಿ ಆತ್ಮಹತ್ಯೆ ಚೀಟಿ ಪತ್ತೆಯಾಗಿದ್ದು, ಅದರಲ್ಲಿ ಅವರು ತನ್ನ ಆತ್ಮಹತ್ಯೆಗೆ ಯಾರನ್ನೂ ದೂರಿಲ್ಲ. ಅವರು ಢಾಕುರಿಯಾದ ಖಾಸಗಿ ಶಾಲೆಯಲ್ಲಿ ಡಿ ಗ್ರೂಪ್ ಉದ್ಯೋಗಿಯಾಗಿದ್ದರು. 1972ರಲ್ಲಿ ಬಾಂಗ್ಲಾದೇಶದ ನವಾಬಗಂಜ್‌ ನಿಂದ ವಲಸೆ ಬಂದಿದ್ದರು ಎನ್ನಲಾಗಿದೆ.

‘ಅವರು ಎನ್‌ಆರ್‌ಸಿ ಬಗ್ಗೆ ತುಂಬ ಚಿಂತಿತರಾಗಿದ್ದರು ಮತ್ತು ಸದಾ ಸುದ್ದಿವಾಹಿನಿಗಳಿಗೆ ಅಂಟಿಕೊಂಡಿರುತ್ತಿದ್ದರು. ಅವರು ಬಂದರೆ ನಮ್ಮನ್ನು ಕರೆದೊಯ್ಯುತ್ತಾರೆ. ನಾನು ಹೋದರೆ ನಿಮ್ಮ ಗತಿಯೇನಾಗುತ್ತದೆ? ಅವರು ನಿಮ್ಮನ್ನು ಬಾಂಗ್ಲಾದೇಶಕ್ಕೆ ಕರೆದೊಯ್ಯುತ್ತಾರೆ. ನಿಮ್ಮನ್ನು ಬಂಧಿಸುತ್ತಾರೆ ’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಅಂತಹದೇನೂ ಆಗುವುದಿಲ್ಲ ಎಂದು ನಾನು ಅವರಿಗೆ ಪದೇ ಪದೇ ಹೇಳಿದ್ದೆ. ಆದರೆ ಅವರು ಕೇಳುತ್ತಿರಲಿಲ್ಲ’ ಎಂದು ಸಹಾ ಅವರ ಪತ್ನಿ ಆರತಿ ಹೇಳಿದರು.

ರವಿವಾರ ಬೆಳಿಗ್ಗೆ ಬಾಂಸದ್ರೋನಿಯ ತನ್ನ ನಿವಾಸದಲ್ಲಿ ಮಗನ ಕೋಣೆಯಲ್ಲಿ ಸಹಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಸಹಾ ತನ್ನ ಪತ್ನಿ, ಪುತ್ರ ಮತ್ತು ಸೊಸೆಯೊಂದಿಗೆ ವಾಸವಾಗಿದ್ದರು. ಪುತ್ರ ಪತ್ನಿಯೊಂದಿಗೆ ಮೂರು ದಿನಗಳಿಗೆ ಆಕೆಯ ತವರುಮನೆಗೆ ತೆರಳಿದ್ದರು. ಸಹಾ ಆತನ ಕೊಠಡಿಯಲ್ಲಿ ಮಲಗುತ್ತಿದ್ದರು. ಶನಿವಾರ ರಾತ್ರಿ ಊಟದ ಬಳಿಕ ಅವರು ಮಲಗಲೆಂದು ತೆರಳಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದರು.

ಸಹಾ ಕಳೆದೆರಡು ವರ್ಷಗಳಿಂದ ಖಿನ್ನತೆಗೆ ಒಳಗಾಗಿದ್ದರು. ನರವೈಜ್ಞಾನಿಕ ಸಮಸ್ಯೆಗಳಿಂದಲೂ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರು ಈ ಮೊದಲು, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸಂದರ್ಭದಲ್ಲಿ ಮಾತ್ರವಲ್ಲ, ಉಕ್ರೇನ್-ರಶ್ಯಾ ಯುದ್ಧದ ವೇಳೆಯೂ ಆತಂಕಗೊಂಡಿದ್ದನ್ನು ಕುಟುಂಬದವರು ಗಮನಿಸಿದ್ದರು ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News