×
Ad

ಕೋಲ್ಕತಾ ಕಿರಿಯ ವೈದ್ಯೆ ಪ್ರಕರಣ| ಸಾಮೂಹಿಕ ಅತ್ಯಾಚಾರ ನಡೆದಿರಲಿಲ್ಲ ಎಂದು ಸಿಬಿಐ ತನಿಖೆ ಸೂಚಿಸುತ್ತಿದೆ: ಮೂಲಗಳು

Update: 2024-08-22 16:45 IST

PC : PTI 

ಹೊಸದಿಲ್ಲಿ: ಕೋಲ್ಕತಾದಲ್ಲಿ 31ರ ಹರೆಯದ ಕಿರಿಯ ವೈದ್ಯೆಯ ಹತ್ಯೆ ಪ್ರಕರಣದಲ್ಲಿ ಸಿಬಿಐ ಈವರೆಗೆ ನಡೆಸಿರುವ ತನಿಖೆಯು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರಲಿಲ್ಲ ಎನ್ನುವುದನ್ನು ಸೂಚಿಸಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಆ.9ರಂದು ಸರಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ಈ ಘೋರ ಕೃತ್ಯಕ್ಕಾಗಿ ಬಂಧಿತನಾಗಿರುವ ಕೋಲ್ಕತಾ ಪೋಲಿಸರೊಂದಿಗೆ ಸಂಯೋಜಿತ ನಾಗರಿಕ ಸ್ವಯಂಸೇವಕ ಸಂಜಯ ರಾಯ್ ಮಾತ್ರ ಭಾಗಿಯಾಗಿದ್ದ ಎಂದು ತನಿಖೆಯು ಬೆಟ್ಟು ಮಾಡಿದೆ.

ಮೂಲಗಳ ಪ್ರಕಾರ,ರಾಯ್ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕೊಂದಿದ್ದ ಎನ್ನುವುದನ್ನು ವಿಧಿವಿಜ್ಞಾನ ವರದಿಯು ಸೂಚಿಸಿದೆ. ಈ ಹೇಯ ಕೃತ್ಯದಲ್ಲಿ ಒಬ್ಬನೇ ವ್ಯಕ್ತಿ ಭಾಗಿಯಾಗಿದ್ದನ್ನು ಡಿಎನ್‌ಎ ವರದಿಯೂ ದೃಢಪಡಿಸಿದೆ ಎನ್ನಲಾಗಿದೆ.

ಸಾಮೂಹಿಕ ಅತ್ಯಾಚಾರ ಸಾಧ್ಯತೆಯ ಆರಂಭಿಕ ಸಿದ್ಧಾಂತಗಳು ಮತ್ತು ಆರೋಪಗಳು,ಅಪರಾಧದ ತನಿಖೆಯ ಕುರಿತು ಕೆಸರೆರಚಾಟ,ಇಡೀ ದೇಶವನ್ನು ತಲ್ಲಣಗೊಳಿಸಿದ್ದ ಬರ್ಬರತೆ ಮತ್ತು ಸಾಮೂಹಿಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಬಹಿರಂಗಗೊಳಿಸುವಿಕೆಯು ಮಹತ್ವವನ್ನು ಪಡೆದುಕೊಂಡಿದೆ.

ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಕಿರಿಯ ವೈದ್ಯೆಯ ಅರೆನಗ್ನ ಮೃತದೇಹ ಪತ್ತೆಯಾದ ಮರುದಿನ,ಆ.10ರಂದು ರಾಯ್‌ನನ್ನು ಬಂಧಿಸಲಾಗಿತ್ತು. ವೈದ್ಯೆಯ ಹತ್ಯೆ ನಡೆದಿದ್ದ ಕಟ್ಟಡವನ್ನು ರಾಯ್ ಪ್ರವೇಶಿಸಿದ್ದನ್ನು ತೋರಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಿಬಿಐ ಪರಿಶೀಲಿಸಿದೆ ಎಂದು ಮಾಧ್ಯಮ ವರದಿಯು ಹೇಳಿದೆ.

ಕೌಟುಂಬಿಕ ದೌರ್ಜನ್ಯದ ಇತಿಹಾಸ ಹೊಂದಿರುವ ರಾಯ್ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಪ್ರವೇಶಿಸುವ ಅವಕಾಶವನ್ನು ಹೊಂದಿದ್ದ. ಅಪರಾಧ ಸ್ಥಳದಲ್ಲಿ ಆತನ ಬ್ಲ್ಯೂಟೂಥ್ ಹೆಡ್‌ಸೆಟ್ ಪತ್ತೆಯಾದ ಬಳಿಕ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದ.

ಆದರೆ ಪ್ರಕರಣದಲ್ಲಿ ಇನ್ನಷ್ಟು ಜನರು ಭಾಗಿಯಾಗಿದ್ದರೇ ಎಂಬ ಕುರಿತು ತನ್ನ ತನಿಖೆಯನ್ನು ಸಿಬಿಐ ಇನ್ನೂ ಪೂರ್ಣಗೊಳಿಸಿಲ್ಲ. ಅದು ಅಂತಿಮ ಅಭಿಪ್ರಾಯವನ್ನು ಕೋರಿ ವಿಧಿವಿಜ್ಞಾನ ವರದಿಯನ್ನು ಸ್ವತಂತ್ರ ತಜ್ಞರಿಗೆ ಕಳುಹಿಸುವ ಸಾಧ್ಯತೆಯಿದೆ.

ಈ ಹಿಂದೆ ವೈದ್ಯರೋರ್ವರು ವೆಜೈನಲ್ ಸ್ವಾಬ್ ಪರೀಕ್ಷೆಯಲ್ಲಿ ‘150 ಮಿಲಿಗ್ರಾಮ್ ದ್ರವ’ ಪತ್ತೆಯಾಗಿದ್ದು,ಕಿರಿಯ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರಬಹುದು ಎಂದು ಹೇಳಿದ್ದರು.

ಕಿರಿಯ ವೈದ್ಯೆಯ ಶರೀರದಲ್ಲಿ ಉಂಟಾಗಿರುವ ಗಾಯಗಳ ಸ್ವರೂಪವನ್ನು ಗಮನಿಸಿದರೆ, ಇದು ಒಬ್ಬ ವ್ಯಕ್ತಿಯ ಕೆಲಸವಲ್ಲ ಎಂದು ಡಾ.ಸುವರ್ಣ ಗೋಸ್ವಾಮಿ ಹೇಳಿದ್ದರು.

ಕಿರಿಯ ವೈದ್ಯೆಯ ಪೋಷಕರೂ ಕಲಕತ್ತಾ ಉಚ್ಚ ನ್ಯಾಯಾಲಯದಲ್ಲಿ ಈ ವಾದವನ್ನು ಮಂಡಿಸಿ, ತಮ್ಮ ಪುತ್ರಿಯ ಶರೀರದಲ್ಲಿ ‘ಗಮನಾರ್ಹ ಪ್ರಮಾಣದ ವೀರ್ಯವಿದೆ ಮತ್ತು ಇದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಸೂಚಿಸುತ್ತಿದೆ ಎಂದು ಆರೋಪಿಸಿದ್ದರು.

ಈ ಆರೋಪಗಳನ್ನು ತಿರಸ್ಕರಿಸಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು,ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿರುವ 150 ಮಿಲಿಗ್ರಾಮ್ ಒಳ ಮತ್ತು ಹೊರ ಜನನಾಂಗದ ತೂಕವನ್ನು ಸೂಚಿಸುತ್ತದೆ ಎಂದು ಪ್ರತಿಪಾದಿಸಿದ್ದರು. ದ್ರವಗಳನ್ನು ಮಿಲಿಲೀಟರ್‌ಗಳಲ್ಲಿ ಅಳೆಯಲಾಗುತ್ತದೆ ಎಂದೂ ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News