×
Ad

ಕೋಲ್ಕತ್ತಾ| ಕೆಲಸದ ಅವಧಿಯಲ್ಲಿ ಹಿಜಾಬ್‌ ಧರಿಸದಂತೆ ಸೂಚನೆ: ಶಿಕ್ಷಕಿ ರಾಜಿನಾಮೆ ಬಳಿಕ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ

Update: 2024-06-11 11:49 IST

PC : PTI 

ಕೋಲ್ಕತ್ತಾ: ಕೆಲಸದ ಅವಧಿಯಲ್ಲಿ ಹಿಜಾಬ್‌ ಧರಿಸದಂತೆ ಕಾಲೇಜು ಆಡಳಿತ ಮಂಡಳಿ ಒತ್ತಡ ಹೇರಿದ ಹಿನ್ನಲೆಯಲ್ಲಿ, ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಖಾಸಗಿ ಕಾನೂನು ಕಾಲೇಜಿನ ಶಿಕ್ಷಕಿಯೊಬ್ಬರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ, ಇದು ಸಾರ್ವಜನಿಕರಲ್ಲಿ ಅಸಮಧಾನಕ್ಕೆ ಕಾರಣವಾಗಿದ್ದು, ಆದರೆ ಸಂವಹನದ ಕೊರತೆಯಿಂದ ಹೀಗಾಗಿದೆ ಎಂದು ಕಾಲೇಜು ಅಧಿಕಾರಿಗಳು ಹೇಳಿದ್ದು ಶಿಕ್ಷಕಿ ರಾಜೀನಾಮೆ ಹಿಂಪಡೆದು, ಜೂನ್ 11 ರಿಂದ ತರಗತಿಗಳಿಗೆ ಅವರು ಹಿಂತಿರುಗುತ್ತಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ಕಳೆದ ಮೂರು ವರ್ಷಗಳಿಂದ ಎಲ್‌ಜೆಡಿ ಕಾನೂನು ಕಾಲೇಜಿನಲ್ಲಿ ಬೋಧನೆ ಮಾಡುತ್ತಿದ್ದ ಸಂಜಿದಾ ಖಾದರ್ ಜೂನ್ 5 ರಂದು ರಾಜೀನಾಮೆ ನೀಡಿದ್ದರು. ಮೇ 31 ರ ನಂತರ ಕೆಲಸದ ವೇಳೆಯಲ್ಲಿ ಹಿಜಾಬ್ ಧರಿಸದಂತೆ ಕಾಲೇಜು ಅಧಿಕಾರಿಗಳು ಸೂಚಿಸಿದ್ದರು ಎಂದು ಹೇಳಲಾಗಿದೆ.

"ಕಾಲೇಜು ಆಡಳಿತ ಮಂಡಳಿಯ ಆದೇಶವು ನನ್ನ ಮೌಲ್ಯಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಸಂಜಿದಾ ಕಾಲೇಜಿಗೆ ತಮ್ಮ ರಾಜಿನಾಮೆಯನ್ನು ಸಲ್ಲಿಸಿದ್ದರು.

ಹಿಜಾಬ್‌ ಕಾರಣಕ್ಕೆ ಶಿಕ್ಷಕಿ ರಾಜೀನಾಮೆ ನೀಡಿದ್ದಾರೆಂಬ ವಿಷಯ ಸಾರ್ವಜನಿಕಗೊಳ್ಳುತ್ತಿದ್ದಂತೆ ಎಚ್ಚೆತ್ತ ಕಾಲೇಜು ಅಧಿಕಾರಿಗಳು ಶಿಕ್ಷಕಿಯನ್ನು ಸಂಪರ್ಕಿಸಿದ್ದು, ಇದು ಕೇವಲ ಸಂವಹನದ ಕೊರತೆಯಿಂದ ಉಂಟಾಗಿರುವ ಪ್ರಮಾದ, ಕೆಲಸದ ಸಮಯದಲ್ಲಿ ತಲೆ ಮುಚ್ಚಿಕೊಳ್ಳುವುದನ್ನು ನಾವು ಎಂದಿಗೂ ನಿಷೇಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಲ್ಲಾ ಅಧ್ಯಾಪಕರ ವಸ್ತ್ರ ಸಂಹಿತೆಯನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತದೆ ಎಂದು ಇಮೇಲ್ ಸ್ಪಷ್ಟಪಡಿಸಿದೆ. ಪಾಠ ಮಾಡುವಾಗ ಅವರ ತಲೆಯನ್ನು ಮುಚ್ಚಿಕೊಳ್ಳಲು ದುಪಟ್ಟಾ ಅಥವಾ ಸ್ಕಾರ್ಫ್ ಅನ್ನು ಬಳಸಲು ಸ್ವತಂತ್ರರಾಗಿರುತ್ತಾರೆ ಎಂದು ಅದು ಹೇಳಿದೆ.

"ಯಾವುದೇ ನಿರ್ದೇಶನ ಅಥವಾ ನಿಷೇಧವಿಲ್ಲ. ಕಾಲೇಜು ಅಧಿಕಾರಿಗಳು ಪ್ರತಿಯೊಬ್ಬರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾರೆ. ಅವರು ಮಂಗಳವಾರದಿಂದ ತರಗತಿಗಳನ್ನು ಪುನರಾರಂಭಿಸುತ್ತಾರೆ," ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲ್ ದಾಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News