ಕೋಲ್ಕತ್ತಾ | ದುರ್ಗಾ ಪೂಜಾ ಮಂಟಪದಲ್ಲಿ ಏರ್ ಇಂಡಿಯಾ ವಿಮಾನ ಪತನದ ದೃಶ್ಯ ಮರು ಸೃಷ್ಟಿ : ವ್ಯಾಪಕ ಆಕ್ರೋಶ
Screengrab:X/@desimojito
ಕೋಲ್ಕತ್ತಾ : ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ದುರ್ಗಾ ಪೂಜಾ ಮಂಟಪದಲ್ಲಿ ಏರ್ ಇಂಡಿಯಾ ವಿಮಾನ ಪತನದ ದೃಶ್ಯವನ್ನು ಮರು ಸೃಷ್ಟಿಸಲಾಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವೀಡಿಯೊದಲ್ಲಿ ಪೂಜಾ ಮಂಟಪದ ವಿನ್ಯಾಸದಲ್ಲಿ ಪತನವಾದ ವಿಮಾನ, ಅವಶೇಷಗಳು ಮತ್ತು ಕೃತಕ ಅಗ್ನಿ ಜ್ವಾಲೆಯ ದೃಶ್ಯಗಳು ಕಂಡು ಬಂದಿದೆ. ಗುಜರಾತ್‌ನ ಅಹ್ಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತರಿಗೆ ಶ್ರದ್ಧಾಂಜಲಿ ನೀಡುವ ಉದ್ದೇಶದಿಂದ ಈ ರೀತಿ ತಾತ್ಕಾಲಿಕ ಮಂಟಪ ನಿರ್ಮಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ.
ಆದರೆ, ತಾತ್ಕಾಲಿಕ ಮಂಟಪದ ಪೋಟೊ, ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ. ಏರ್ ಇಂಡಿಯಾ ವಿಮಾನ ಪತನದ ರೀತಿಯಲ್ಲಿ ದುರ್ಗಾ ಪೂಜಾ ಮಂಟಪ ನಿರ್ಮಿಸಿರುವುದಕ್ಕೆ ಹಲವರು “ಅಸಂವೇದನಶೀಲ” ಮತ್ತು “ನಾಚಿಕೆಗೇಡು” ಎಂದು ಕರೆದಿದ್ದಾರೆ. ವಿಮಾನ ದುರಂತದಲ್ಲಿ ಮೃತರ ಕುಟುಂಬದ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಜೂನ್ 12ರಂದು ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹ್ಮದಾಬಾದ್‌ನ ಬಿ.ಜೆ. ಮೆಡಿಕಲ್ ಕಾಲೇಜು ವಸತಿ ನಿಲಯದ ಕಟ್ಟಡದ ಮೇಲೆ ಪತನವಾಗಿತ್ತು. ಈ ದುರಂತದಲ್ಲಿ ಒಟ್ಟು 260 ಜನರು ಮೃತಪಟ್ಟಿದ್ದರು.
Not all Bongs, but Bongs always 🤡 pic.twitter.com/pjGnf594pI
— desi mojito (@desimojito) October 3, 2025