×
Ad

ಪ್ರಧಾನಿ ಮೋದಿ ಸಂಭಾವ್ಯ ಮಣಿಪುರ ಭೇಟಿಯನ್ನು ಸ್ವಾಗತಿಸಿದ ಕುಕಿ-ಝೋ ಸಂಘಟನೆಗಳು: ನೃತ್ಯ ಕಾರ್ಯಕ್ರಮಕ್ಕೆ ವಿರೋಧ

"ಕಣ್ಣಿನಲ್ಲಿ ಕಣ್ಣೀರಿಟ್ಟುಕೊಂಡು ನೃತ್ಯ ಮಾಡಲು ಸಾಧ್ಯವಿಲ್ಲ"

Update: 2025-09-10 20:26 IST

ನರೇಂದ್ರ ಮೋದಿ | PC : ddnews.gov.in

ಇಂಫಾಲ/ಚೂರಚಂದ್ ಪುರ್: ಸೆಪ್ಟೆಂಬರ್ 13ರ ಪ್ರಧಾನಿ ನರೇಂದ್ರ ಮೋದಿಯವರ ಸಂಭಾವ್ಯ ಮಣಿಪುರ ಭೇಟಿಯನ್ನು ಕುಕಿ-ಝೋ ಸಮುದಾಯವನ್ನು ಪ್ರತಿನಿಧಿಸುವ ಹಲವಾರು ಸಂಘಟನೆಗಳು ಸ್ವಾಗತಿಸಿದ್ದು, ಈ ಕಾರ್ಯಕ್ರಮದ ಭಾಗವಾಗಿ ಅವರನ್ನು ಸ್ವಾಗತಿಸಲು ಹಮ್ಮಿಕೊಳ್ಳಲಾಗಿರುವ ನೃತ್ಯ ಕಾರ್ಯಕ್ರಮವನ್ನು ವಿರೋಧಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರು ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬದಲು ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಜನರೊಂದಿಗೆ ಮಾತುಕತೆ ನಡೆಸಬೇಕು ಎಂದು ಇಂಫಾಲದ ನಿರಾಶ್ರಿತ ಹ್ಮಾರ್ ಸಮುದಾಯ ಆಗ್ರಹಿಸಿದೆ.

ನಾವು ಪ್ರಧಾನಿ ನರೇಂದ್ರ ಮೋದಿಯವರ ಸಂಭಾವ್ಯ ಮಣಿಪುರ ಭೇಟಿಯನ್ನು ಸ್ವಾಗತಿಸುತ್ತೇವೆ ಎಂದು ಹೇಳಿರುವ ಚೂರಚಂದ್ ಪುರ್ ನಲ್ಲಿನ ಗಾಂಗ್ಟೆ ಸ್ಟೂಡೆಂಟ್ಸ್ ಸಂಘಟನೆ, “ನಾವು ನಮ್ಮ ಕಣ್ಣಿನಲ್ಲಿ ಕಣ್ಣೀರಿಟ್ಟುಕೊಂಡು ನೃತ್ಯ ಮಾಡಲು ಸಾಧ್ಯವಿಲ್ಲ! ನಮ್ಮ ದುಃಖವು ಇನ್ನೂ ಮುಗಿದಿಲ್ಲ, ನಮ್ಮ ಕಣ್ಣೀರು ಇನ್ನೂ ಆರಿಲ್ಲ, ನಮ್ಮ ಗಾಯಗಳು ಇನ್ನೂ ವಾಸಿಯಾಗಿಲ್ಲ, ನಾವು ಸಂತೋಷದೊಂದಿಗೆ ನೃತ್ಯ ಮಾಡಲು ಸಾಧ್ಯವಿಲ್ಲ” ಎಂದು ಪತ್ರಿಕಾ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದೆ.

ಅದ್ದೂರಿ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಳ್ಳುವ ಬದಲು, ನಿರಾಶ್ರಿತರ ಶಿಬಿರಗಳಲ್ಲಿ ಇರಿಸಲಾಗಿರುವ ಸ್ಥಳಾಂತರಗೊಂಡಿರುವ ಜನರೊಂದಿಗೆ ಮಾತುಕತೆ ನಡೆಸಬೇಕು ಎಂದು ಈ ಸಂಘಟನೆ ಆಗ್ರಹಿಸಿದೆ.

ಆದರೆ, ಮಣಿಪುರದಲ್ಲಿ ಪ್ರಧಾನಿಯ ಉಪಸ್ಥಿತಿಯಿಂದ ಜನಾಂಗೀಯ ಹಿಂಸಾಚಾರದಲ್ಲಿ ಗಾಯಗೊಂಡಿರುವ ಜನರ ಗಾಯ ವಾಸಿಯಾಗಲಿದೆ ಹಾಗೂ ಅವರ ಕುಂದುಕೊರತೆಯನ್ನು ವ್ಯಕ್ತಪಡಿಸಲು ಸಹಾಯಕವಾಗಲಿದೆ ಎಂದೂ ಈ ಸಂಘಟನೆ ಅಭಿಪ್ರಾಯಪಟ್ಟಿದೆ.

ಕುಕಿ ಸಮುದಾಯದ ಅತ್ಯುನ್ನತ ಸಂಘಟನೆಯಾದ ಕುಕಿ ಇನ್ಪಿ ಮಣಿಪುರ್, “ಪ್ರಧಾನಿಗಳನ್ನು ಮಣಿಪುರಕ್ಕೆ ಸ್ವಾಗತಿಸಲೇಬೇಕಿದೆ. ಆದರೆ, ಈ ಭೇಟಿಯು ನ್ಯಾಯವನ್ನು ಒದಗಿಸಬೇಕು ಹಾಗೂ ಕುಕಿ-ಝೋ ಜನರ ಸಾಮೂಹಿಕ ಆಕಾಂಕ್ಷೆಯನ್ನು ಗುರುತಿಸಬೇಕು” ಎಂದು ಬೇಡಿಕೆ ಇಟ್ಟಿದೆ.

ರಾಜಕೀಯ ಪರಿಹಾರಕ್ಕಾಗಿನ ಆಗ್ರಹ ಸ್ಪಷ್ಟ ಮತ್ತು ದೃಢವಾಗಿದ್ದು, ತಾತ್ಕಾಲಿಕ ಪರಿಹಾರ ಕ್ರಮಗಳು ದೀರ್ಘಕಾಲೀನ ಪರಿಹಾರವನ್ನು ಒದಗಿಸಲು ಸಾಧ್ಯಿವಿಲ್ಲ ಎಂದೂ ಈ ಸಂಘಟನೆ ಸ್ಪಷ್ಟಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿಯ ಸಂಭಾವ್ಯ ಮಣಿಪುರ ಭೇಟಿಯು ತಮ್ಮ ಸಂಕಷ್ಟಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ಎಂದು ಮೈತೇಯಿ ಸಮುದಾಯದ ಪ್ರಾಬಲ್ಯವಿರುವ ಇಂಫಾಲ ಕಣಿವೆ ಪ್ರದೇಶದ ಒಂದು ವರ್ಗ ಭಾವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News