ಕುಲ್ಗಾಮ್ ಕಾರ್ಯಾಚರಣೆ: ಆರು ಉಗ್ರರ ಹತ್ಯೆ
ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಫ್ರಿಸಲ್ ಚಿನ್ನಿಗಾಮ್ ನಲ್ಲಿ ಉಗ್ರಗಾಮಿಗಳ ವಿರುದ್ಧ ಭಾನುವಾರ ಮುಂಜಾನೆಯಿಂದಲೇ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಮತ್ತೆ ಇಬ್ಬರು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದ್ದು, ಒಟ್ಟು ಹತ್ಯೆಯಾದ ಉಗ್ರರ ಸಂಖ್ಯೆ ಆರಕ್ಕೇರಿದೆ.
ಮೊಡೆರ್ ಗಾಮ್ ಹಾಗೂ ಫ್ರಿಸಲ್ ಚಿನ್ನಿಗಾಮ್ ನಲ್ಲಿ ಶನಿವಾರ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಸೇನೆಯ ಪ್ಯಾರಾ ಕಮಾಂಡೊ ಘಟಕದ ಲ್ಯಾನ್ಸ್ ನಾಯಕ್ ಪ್ರದೀಪ್ ನೈನ್ ಮತ್ತು ರಾಷ್ಟ್ರೀಯ ರೈಫಲ್ಸ್ ನ ಸಿಪಾಯಿ ಪ್ರವೀಣ್ ಜಂಜಲ್ ಉಗ್ರರ ಗುಂಡಿಗೆ ಬಲಿಯಾದ ಬಳಿಕ ಭದ್ರತಾ ಪಡೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ.
ಫ್ರಿಸಲ್ ಚಿನ್ನಿಗಾಮ್ ನಲ್ಲಿ ಕಾರ್ಯಾಚರಣೆ ಮುಂದುವರಿದಿರುವುದನ್ನು ಡಿಜಿಪಿ ಆರ್.ಆರ್.ಸ್ವೈನ್ ದೃಢಪಡಿಸಿದ್ದಾರೆ. ಇದುವರೆಗೆ ಆರು ಮಂದಿ ಉಗ್ರರ ದೇಹಗಳು ಪತ್ತೆಯಾಗಿವೆ. ಎರಡು ಪ್ರತ್ಯೇಕ ಕಡೆಗಳಲ್ಲಿ ಕಾರ್ಯಾಚರಣೆಗಳು ನಡೆಯುತ್ತಿವೆ. ಆರು ಮಂದಿ ಉಗ್ರರ ಹತ್ಯೆ ಒಂದು ಮೈಲುಗಲ್ಲಿನ ಸಾಧನೆ. ಇನ್ನೂ ಕಾರ್ಯಾಚರಣೆ ಮುಕ್ತಾಯವಾಗದ ಹಿನ್ನೆಲೆಯಲ್ಲಿ ಮೃತಪಟ್ಟ ಉಗ್ರರ ಗುರುತು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರದ ವರೆಗೆ ಪ್ರಸಕ್ತ ವರ್ಷ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಒಟ್ಟು 27 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಪೈಕಿ ಜೂನ್ 9, 11 ಮತ್ತು 12ರಂದು ನಡೆದ ಕಾರ್ಯಾಚರಣೆಗಳಲ್ಲಿ ಹತರಾದವರ ಸಂಖ್ಯೆ 11 ಆಗಿರುತ್ತದೆ.