ಸತ್ಯವನ್ನು ಮುಚ್ಚಿಡುವುದು ಪಾಪಪ್ರಜ್ಞೆಯ ಸಂಕೇತ: ಕುಂಭಮೇಳದ ಕುರಿತು ಪ್ರಧಾನಿ ಮೋದಿ ಪೋಸ್ಟ್ ಗೆ ಅಖಿಲೇಶ್ ಯಾದವ್ ಪ್ರತಿಕ್ರಿಯೆ
ಅಖಿಲೇಶ್ ಯಾದವ್ , ನರೇಂದ್ರ ಮೋದಿ | PTI
ಹೊಸದಿಲ್ಲಿ: ಪ್ರಯಾಗ್ ರಾಜ್ ನಲ್ಲಿ ನಿನ್ನೆ (ಫೆ. 26) ಸಮಾರೋಪಗೊಂಡ ಮಹಾ ಕುಂಭಮೇಳದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಪೋಸ್ಟ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಸತ್ಯವನ್ನು ಮುಚ್ಚಿಡುವುದು ಪಾಪಪ್ರಜ್ಞೆಯ ಸಂಕೇತ” ಎಂದು ವ್ಯಂಗ್ಯವಾಡಿದ್ದಾರೆ.
“ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಸಾಧುಗಳು, ಸಂತರು, ವಯೋವೃದ್ಧರು, ಮಹಿಳೆಯರು ಹಾಗೂ ಯುವಕರು ನೆರೆದಿದ್ದರು. ಅವರೆಲ್ಲ ದೇಶದ ಎಚ್ಚೆತ್ತ ಪ್ರಜ್ಞೆಗೆ ಸಾಕ್ಷಿಯಾದರು” ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಪೋಸ್ಟ್ ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್, “ಎರಡು ನಿಮಿಷಗಳ ಮೌನವಲ್ಲದಿದ್ದರೂ, ಮಹಾ ಕುಂಭಮೇಳದ ಬಗ್ಗೆ ಇಷ್ಟು ದೊಡ್ಡ ಮಾತುಗಳನ್ನು ಬರೆಯುವಾಗ, ನೀವು ಮಹಾ ಕುಂಭಮೇಳದಲ್ಲಿ ಮೃತಪಟ್ಟ ಹಾಗೂ ನಾಪತ್ತೆಯಾದವರ ಕುರಿತೂ ಕೆಲವು ಮಾತುಗಳನ್ನು ಬರೆಯಬಹುದಾಗಿತ್ತು” ಎಂದು ಅವರ ಹೆಸರನ್ನು ಉಲ್ಲೇಖಿಸದೆ ವ್ಯಂಗ್ಯವಾಡಿದ್ದಾರೆ. ಮುಂದುವರಿದು, “ಸತ್ಯವನ್ನು ಮುಚ್ಚಿಡುವುದು ಪಾಪಪ್ರಜ್ಞೆಯ ಸಂಕೇತ” ಎಂದೂ ಛೇಡಿಸಿದ್ದಾರೆ.
ಜನವರಿ 29ರಂದು ಪ್ರಯಾಗ್ ರಾಜ್ ನ ಮಹಾ ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟು, ಸುಮಾರು 60 ಮಂದಿ ಗಾಯಗೊಂಡಿದ್ದರು.