×
Ad

ಕುನೋ: 10ನೇ ಚೀತಾ ಸಾವು

Update: 2024-01-16 23:00 IST

ಸಾಂದರ್ಭಿಕ ಚಿತ್ರ (PTI)

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ಇನ್ನೊಂದು ಚೀತಾ ಮೃತಪಟ್ಟಿದೆ. ಇದರೊಂದಿಗೆ 2022ರಲ್ಲಿ ಭಾರತಕ್ಕೆ ತರಿಸಲ್ಪಟ್ಟ ಚೀತಾಗಳಲ್ಲಿ ಸಾವನ್ನಪ್ಪಿದವುಗಳ ಸಂಖ್ಯೆ 10ಕ್ಕೇರಿದೆ. ನಮೀಬಿಯದಿಂದ ತರಲಾಗಿದ್ದ ಶೌರ್ಯ ಹೆಸರಿನ ಚೀತಾ ಇಂದು ಸಾವನ್ನಪ್ಪಿದೆ, ಅದರ ಸಾವಿಗೆ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಗೊತ್ತಾಗಲಿದೆಯೆಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈವರೆಗೆ ಏಳು ವಯಸ್ಕ ಹಾಗೂ ಮೂರು ಮರಿ ಚೀತಾಗಳು ಸಾವನ್ನಪ್ಪಿವೆ. ಶೌರ್ಯ ಚಿರತೆಯು ನಿಶ್ಶಕ್ತಿಯಿಂದ ಸಂಚರಿಸುತ್ತಿದ್ದುದನ್ನು ಗಮನಿಸಿದ ಟ್ರ್ಯಾಕಿಂಗ್ ತಂಡವು, ಅದಕ್ಕೆ ಅರಿವಳಿಕೆ ಬರಿಸುವ ಚುಚ್ಚುಮದ್ದನ್ನು ನೀಡಿ ಶುಶ್ರೂಷೆ ನಡೆಸಿತೆಂದು ಲಯನ್ ಪ್ರಾಜೆಕ್ಟ್‌ನ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿಯವರ ಹೇಳಿಕೆ ತಿಳಿಸಿದೆ.

ಶುಶ್ರೂಷೆಯ ಬಳಿಕ ಚೀತಾವು ಚೇತರಿಸಿಕೊಂಡಿತಾದರೂ, ಸಿಪಿಆರ್ ಚಿಕಿತ್ಸೆಗೆ ಸ್ಪಂದಿಸಲು ಚೀತಾ ವಿಫಲವಾಗಿ ಮೃತಪಟ್ಟಿತೆಂದು ಹೇಳಿಕೆ ತಿಳಿಸಿದೆ.

ಇದಕ್ಕೂ ಮುನ್ನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ವರ್ಷದ ಆಗಸ್ಟ್ 2ರಂದು 9ನೇ ಚೀತಾವು ಸಾವನ್ನಪ್ಪಿತ್ತು.

ಭಾರತೀಯ ಚೀತಾವು 1952ರಲ್ಲಿ ಸಂಪೂರ್ಣವಾಗಿ ನಾಶಗೊಂಡಿರುವುದಾಗಿ ಘೋಷಿಸಲಾಗಿತ್ತು. ಭಾರತದಲ್ಲಿ ಅವುಗಳ ಸಂತತಿಯನ್ನು ಬೆಳೆಸುವ ಉದ್ದೇಶದಿಂದ ಸುಮಾರು 20 ವಯಸ್ಕ ಚೀತಾಗಳನ್ನು ನಮೀಬಿಯಾ (2022ರಲ್ಲಿ) ಹಾಗೂ ದಕ್ಷಿಣ ಆಪ್ರಿಕ (2023ರಲ್ಲಿ)ದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News