ಕುಪ್ವಾರ ಪೊಲೀಸ್ ಠಾಣೆಯ ಮೇಲೆ ಸೇನಾ ಸಿಬ್ಬಂದಿಯಿಂದ ದಾಳಿ ಪ್ರಕರಣ: 3 ಮಂದಿ ಲೆಫ್ಟಿನೆಂಟ್ ಕರ್ನಲ್‌ಗಳ ಸಹಿತ 16 ಸೈನಿಕರ ವಿರುದ್ಧ ಎಫ್‌ಐಆರ್
Image Credit: NDTV
ಶ್ರೀನಗರ: ಕುಪ್ವಾರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೈದ ಆರೋಪದ ಮೇಲೆ ಮೂವರು ಸೇನಾಧಿಕಾರಿಗಳ ಸಹಿತ 16 ಸೈನಿಕರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಯಲ್ಲಿ ಠಾಣಾಧಿಕಾರಿ ಸಹಿತ ಐದು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
ಸೈನಿಕರು ಪೊಲೀಸ್ ಠಾಣೆಗೆ ನುಗ್ಗುತ್ತಿರುವ ವೀಡಿಯೋ ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಹಲ್ಲೆ ಆರೋಪಗಳನ್ನು ರಕ್ಷಣಾ ವಕ್ತಾರರು ನಿರಾಕರಿಸಿದ್ದಾರೆ ಹಾಗೂ ಇದೊಂದು ಸಣ್ಣ ಭಿನ್ನಾಭಿಪ್ರಾಯದ ಘಟನೆ ಎಂದು ಬಣ್ಣಿಸಿದ್ದಾರೆ.
ಆದರೆ ಎಫ್‌ಐಆರ್‌ನಲ್ಲಿ ಮೂವರು ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಅಧಿಕಾರಿಗಳ ಸಹಿತ 16 ಸೈನಿಕರ ಹೆಸರುಗಳಿವೆ. ಹಿಂಸೆ, ಕೊಲೆ ಯತ್ನ ಮತ್ತು ಅಪಹರಣ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.
ಮಂಗಳವಾರ ಪೊಲೀಸರು ಕುಪ್ವಾರ ಜಿಲ್ಲೆಯ ಬಟ್ಪೋರ ಎಂಬಲ್ಲಿ ಟೆರಿಟೋರಿಯಲ್ ಸೇನೆಯ ಸೈನಿಕರೊಬ್ಬರ ಮನೆಯ ಮೇಲೆ ಪ್ರಕರಣವೊಂದರ ತನಿಖೆ ಭಾಗವಾಗಿ ದಾಳಿ ನಡೆಸಿದ್ದರು. ಅದೇ ದಿನ ರಾತ್ರಿ ಸುಮಾರು 9.40ಕ್ಕೆ ಸೈನಿಕರು ಠಾಣೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ದೊಡ್ಡ ಸಂಖ್ಯೆಯ ಶಸ್ತ್ರಸಜ್ಜಿತ ಆದರೆ ಸಮವಸ್ತ್ರದಲ್ಲಿರದ 160 ಟೆರಿಟೋರಿಯಲ್ ಸೇನೆಯ ಸಿಬ್ಬಂದಿ ಮೂವರು ಅಧಿಕಾರಿಗಳ ನೇತೃತ್ವದಲ್ಲಿ ಠಾಣೆಗೆ ನುಗ್ಗಿ ಯಾವುದೇ ಪ್ರಚೋದನೆಯಿಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ.
ಹೆಚ್ಚುವರಿ ಪೊಲೀಸ್ ಪಡೆಗಳು ಠಾಣೆಗೆ ಧಾವಿಸಿ ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
ಆರೋಪಿಗಳಲ್ಲಿ ಲೆಫ್ಟಿನೆಂಟ್ ಕರ್ನಲ್ ಅಂಕಿತ್ ಸೂದ್, ರಾಜು ಚೌಹಾಣ್ ಮತ್ತು ನಿಖಿಲ್ ಸೇರಿದ್ದಾರೆನ್ನಾಗಿದೆ. ಗಾಯಾಳು ಪೊಲೀಸರ ಮತ್ತು ಠಾಣಾಧಿಕಾರಿ ಮೊಹಮ್ಮದ್ ಇಶಾಖ್ ಅವರ ಮೊಬೈಲ್ ಫೋನ್‌ಗಳನ್ನು ಸೆಳೆಯಲಾಗಿದೆ, ಅಷ್ಟೇ ಅಲ್ಲದೆ ಹೆಡ್ ಕಾನ್‌ಸ್ಟೇಬಲ್ ಗುಲಾಂ ರಸೂಲ್ ಅವರನ್ನು ಅಪಹರಿಸಿ ಸ್ಥಳದಿಂದ ಪರಾರಿಯಾಗಿದೆ.
ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಸ್ಥಿರವಾಗಿದೆ.