ಲಡಾಖ್ ನಲ್ಲಿ ಖಾಮಿನೈ ಪರ ರ‍್ಯಾಲಿ: ಕಾರ್ಗಿಲ್ ನ ಲಾಲ್ ಚೌಕ್ ನಲ್ಲಿ ನೂರಾರು ಮಂದಿ ಜಮಾವಣೆ
Photo Credit : timesofindia.indiatimes.com
ಹೊಸದಿಲ್ಲಿ: ಇರಾನ್ ನಲ್ಲಿ ಉಂಟಾಗಿರುವ ಆಂತರಿಕ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ, ಅದರ ಸರ್ವೋಚ್ಚ ನಾಯಕ ಖಾಮಿನೈ ಪರ ಬೆಂಬಲ ವ್ಯಕ್ತಪಡಿಸಲು ಇಮಾಮ್ ಖೊಮೇನಿ ಸ್ಮಾರಕ ಟ್ರಸ್ಟ್ ಕಾರ್ಗಿಲ್‌ನಲ್ಲಿ ರ‍್ಯಾಲಿಯೊಂದನ್ನು ಆಯೋಜಿಸಲಾಗಿತ್ತು ಎಂದು Times of India ವರದಿ ಮಾಡಿದೆ.
ಇರಾನ್ ನ ಆಂತರಿಕ ಬೆಳವಣಿಗೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಹಿನ್ನೆಲೆ, ಅದರ ಸರ್ವೋಚ್ಚ ನಾಯಕ ಅಯತುಲ್ಲಾ ಸೈಯದ್ ಅಲಿ ಖಾಮಿನೈ ಪರ ಕಾರ್ಗಿಲ್‌ನ ವಿವಿಧ ಸ್ಥಳಗಳಲ್ಲಿ ರ‍್ಯಾಲಿಗಳನ್ನು ನಡೆಸಲಾಯಿತು. ಝೈನಾಬಿಯಾ ಚೌಕ್‌ನಿಂದ ಪ್ರಾರಂಭಗೊಂಡ ಮೆರವಣಿಗೆ ಘಾತಿಮಾ ಚೌಕ್ ಹಾಗೂ ಇಸ್ನಾ ಅಶಾರಿಯಾ ಚೌಕ್ ಮೂಲಕ ಸಾಗಿತು. ಮತ್ತೊಂದು ಮೆರವಣಿಗೆ ಜಾಮಿಯಾ ಮಸೀದಿಯಿಂದ ಆರಂಭಗೊಂಡು ಲಾಲ್ ಚೌಕ್ ಹಾಗೂ ಖೊಮೇನಿ ಚೌಕ್ ಮೂಲಕ ಹಾದು ಹೋಯಿತು. ಈ ಎಲ್ಲ ಮೆರವಣಿಗೆಗಳು ಮುಖ್ಯ ಸಭೆ ಆಯೋಜಿಸಲಾಗಿದ್ದ ಕಾರ್ಗಿಲ್‌ನ ಹಳೆಯ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ನೆರೆದವು.
ಈ ರ‍್ಯಾಲಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನರು ಖಾಮಿನೈ ಅವರ ಬ್ಯಾನರ್ ಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ. ಇರಾನ್ ನಲ್ಲಿ ಮುಂದುವರಿದಿರುವ ಆಂತರಿಕ ಪ್ರಕ್ಷುಬ್ಧತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ನಡುವೆಯೇ ಈ ರ‍್ಯಾಲಿ ನಡೆದಿದೆ.
ಈ ನಡುವೆ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಹಾಗೂ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವ ಇರಾನ್, ಅಮೆರಿಕ ಇರಾನ್‌ನಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ, ದೇಶದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದೆ ಮತ್ತು ಇರಾನ್ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಬೆದರಿಕೆ ಒಡ್ಡುತ್ತಿದೆ ಎಂದು ಆರೋಪಿಸಿರುವ ಅಧಿಕೃತ ಪತ್ರವನ್ನು ಬುಧವಾರ ಹಂಚಿಕೊಂಡಿದೆ.