ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಆರೋಪ : ಬಿಜೆಪಿ ನಾಯಕ ಅಜಯ್ ಮಿಶ್ರಾ, ಪುತ್ರ ಆಶಿಶ್ ವಿರುದ್ಧ ಪ್ರಕರಣ ದಾಖಲು
ಅಜಯ್ ಮಿಶ್ರ ತೇನಿ, ಆಶಿಶ್ ಮಿಶ್ರಾ |Photo Credit : ANI
ಲಕ್ನೊ,ಅ. 7: 2021ರ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಸಾಕ್ಷಿಗಳಿಗೆ ಬೆದರಿಗೆ ಒಡ್ಡಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಅಜಯ್ ಮಿಶ್ರ ತೇನಿ, ಅವರ ಪುತ್ರ ಆಶಿಶ್ ಮಿಶ್ರಾ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆದರಿಕೆ ಒಡ್ಡಿರುವ ಬಗ್ಗೆ ಸಾಕ್ಷಿಯೊಬ್ಬರು ನೀಡಿದ ದೂರಿನ ಕುರಿತು ತನಿಖೆ ಮಾಡದಿರುವುದಕ್ಕೆ ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಪೊಲೀಸರನ್ನು ಆಗಸ್ಟ್‌ನಲ್ಲಿ ತರಾಟೆಗೆ ತೆಗೆದುಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.
ಕೇಂದ್ರ ಸರಕಾರದ ಕೃಷಿ ನೀತಿಯ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಅಶೀಶ್ ಮಿಶ್ರಾ ಮಾಲಕತ್ವದ ಥಾರ್ ಮಹೀಂದ್ರಾ ಪ್ರತಿಭಟನೆಕಾರರ ಮೇಲೆ ಹರಿದ ಪರಿಣಾಮ ನಾಲ್ವರು ರೈತರು ಹಾಗೂ ಓರ್ವ ಪತ್ರಕರ್ತ ಮೃತಪಟ್ಟಿದ್ದರು. ಅನಂತರ ನಡೆದ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ನಾಯಕರು ಹಾಗೂ ಥಾರ್ ಚಾಲಕ ಹತ್ಯೆಯಾಗಿದ್ದರು.
ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರಸ್ತುತ ಜಾಮೀನಿನಲ್ಲಿದ್ದಾರೆ. ಆಶಿಶ್ ಮಿಶ್ರಾ ಈ ಪ್ರಕರಣದ ಪ್ರಧಾನ ಆರೋಪಿ. ಬೆದರಿಕೆಗೆ ಸಂಬಂಧಿಸಿ ಅಜಯ್ ಮಿಶ್ರಾ, ಆಶಿಶ್ ಮಿಶ್ರಾ, ಅಮನ್‌ದೀಪ್ ಸಿಂಗ್ ಹಾಗೂ ಇನ್ನೋರ್ವ ಅಪರಿಚಿತನ ವಿರುದ್ಧ ಲಖಿಂಪುರ ಖೇರಿಯ ಪದುವಾ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಲಾಗಿದೆ.