×
Ad

ಲ್ಯಾಟರಲ್ ಎಂಟ್ರಿ ನೇಮಕಾತಿಗಳಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ: ಕೇಂದ್ರ

Update: 2025-08-21 22:21 IST

ಜಿತೇಂದ್ರ ಸಿಂಗ್ | PC ;  X 

ಹೊಸದಿಲ್ಲಿ,ಆ.21: ಲ್ಯಾಟರಲ್ ಎಂಟ್ರಿ ಅಥವಾ ನೇರ ನೇಮಕಾತಿ ಮಾದರಿಯಲ್ಲಿ ನಡೆಯುವ ನೇಮಕಗಳಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಸರಕಾರಿ ಇಲಾಖೆಗಳಲ್ಲಿ ಖಾಸಗಿ ಕ್ಷೇತ್ರಗಳಿಂದ ಸೇರಿದಂತೆ ತಜ್ಞರ ನೇಮಕಾತಿಯನ್ನು ಲ್ಯಾಟರಲ್ ಎಂಟ್ರಿ ಎಂದು ಉಲ್ಲೇಖಿಸಲಾಗುತ್ತದೆ.

ಈವರೆಗೆ 63 ನೇಮಕಾತಿಗಳನ್ನು ಈ ವಿಧಾನದಡಿ ಮಾಡಲಾಗಿದ್ದು,ಇವುಗಳಲ್ಲಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಗುತ್ತಿಗೆ/ಪ್ರಭಾರ ಆಧಾರದಲ್ಲಿ ಜಂಟಿ ಕಾರ್ಯದರ್ಶಿ/ನಿರ್ದೇಶಕ/ಉಪ ಕಾರ್ಯದರ್ಶಿ ಮಟ್ಟದ ಹುದ್ದೆಗಳು ಸೇರಿವೆ. 2018ರಿಂದ ಮೂರು ಹಂತಗಳಲ್ಲಿ(2018,2021,2023) ಈ ನೇಮಕಾತಿಗಳು ನಡೆದಿವೆ ಎಂದು ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದರು.

ಅಭ್ಯರ್ಥಿಗಳ ವಿಶೇಷ ಜ್ಞಾನ ಮತ್ತು ಪರಿಣಿತಿಯನ್ನು ಆಧರಿಸಿ ನಿರ್ದಿಷ್ಟ ನಿಯೋಜನೆಗಳಿಗಾಗಿ ಈ ನೇಮಕಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಈ ಪ್ರತಿಯೊಂದೂ ನೇಮಕಾತಿಯನ್ನು ಕೇಡರ್‌ ನ ಒಂದೊಂದೇ ಹುದ್ದೆಗಳಿಗೆ ಮಾಡಲಾಗಿರುವುದರಿಂದ ‘ಪಿಜಿಐಎಂಇಆರ್ ಚಂಡಿಗಡ ವಿರುದ್ಧ ಬೋಧಕರ ಸಂಘ ಮತ್ತು ಇತರರು’ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ ಮತ್ತು ಅದಕ್ಕೆ ಅನುಗುಣವಾಗಿ ನೇಮಕಗೊಂಡ ಅಧಿಕಾರಿಗಳ ವರ್ಗವಾರು ಮಾಹಿತಿಗಳನ್ನು ನಿರ್ವಹಿಸಲಾಗಿಲ್ಲ ಎಂದು ಸಿಂಗ್ ತಿಳಿಸಿದರು.

ಪ್ರಸ್ತುತ ವಿವಿಧ ಸಚಿವಾಲಯಗಳು/ಇಲಾಖೆಗಳು ಲ್ಯಾಟರಲ್ ಎಂಟ್ರಿ ಮೂಲಕ ನೇಮಕಗೊಂಡ 43 ಅಧಿಕಾರಿಗಳನ್ನು ಹೊಂದಿವೆ ಎಂದರು.

ಕಳೆದ ಐದು ವರ್ಷಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಕೇಂದ್ರ ಸರಕಾರದಲ್ಲಿ ನೇಮಕಗೊಂಡಿರುವ ಅಧಿಕಾರಿಗಳ ವಿವರಗಳು ಮತ್ತು ಈ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಅನುಸರಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಕೋರಿದ್ದ ಪ್ರಶ್ನೆಗಳಿಗೆ ಸಚಿವರು ಉತ್ತರಿಸುತ್ತಿದ್ದರು.

ಮೀಸಲಾತಿಗೆ ಅವಕಾಶ ನೀಡದಿರುವ ಕುರಿತು ರಾಜಕೀಯ ವಿವಾದದ ಬಳಿಕ ಕೇಂದ್ರ ಲೋಕಸೇವಾ ಆಯೋಗವು ಕಳೆದ ವರ್ಷದ ಆಗಸ್ಟ್‌ನಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಸರಕಾರದ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲು ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News