×
Ad

ದಿಲ್ಲಿ ಹೈಕೋರ್ಟ್ ವರ್ಚುಯಲ್ ವಿಚಾರಣೆ ವೇಳೆ ಮಹಿಳೆಗೆ ಚುಂಬಿಸಿದ ವಕೀಲ: ವಿಡಿಯೊ ವೈರಲ್

Update: 2025-10-16 21:02 IST

Screengrab : X\ @ShoneeKapoor

ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ನ ವಿಡಿಯೊ ಕಾನ್ಫರೆನ್ಸ್ ವಿಚಾರಣೆ ಸಂದರ್ಭದಲ್ಲಿ ವಕೀಲರೊಬ್ಬರು ಮಹಿಳೆಗೆ ಚುಂಬಿಸಲು ಮುಂದಾಗಿರುವ ವಿಡಿಯೊ ವೈರಲ್ ಆಗಿದ್ದು, ವಕೀಲರ ಈ ವೃತ್ತಿಪರ ವರ್ತನೆಯ ವಿರುದ್ಧ ವ್ಯಾಪಕ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿದೆ.

ನ್ಯಾಯಾಲಯದ ಶಿಷ್ಟಾಚಾರದನ್ವಯ, ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕರಣವೊಂದರ ವಿಚಾರಣೆ ನಡೆಯುವಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆ ಮಂಗಳವಾರ ನಡೆದಿದ್ದು, ಆಗಿನ್ನೂ ನ್ಯಾಯಾಲಯದ ಕಲಾಪ ಪ್ರಾರಂಭಗೊಂಡಿರಲಿಲ್ಲ ಹಾಗೂ ನ್ಯಾಯಾಧೀಶರ ಬರುವಿಕೆಗಾಗಿ ಜನರು ಕಾಯುತ್ತಿದ್ದರು ಎನ್ನಲಾಗಿದೆ.

ವಕೀಲರು ನ್ಯಾಯಾಲಯದ ಸಮವಸ್ತ್ರದೊಂದಿಗೆ ತಮ್ಮ ಕೊಠಡಿಯಲ್ಲಿ ಕುಳಿತಿದ್ದು, ಕ್ಯಾಮೆರಾದಿಂದ ಸ್ವಲ್ಪವೇ ದೂರ ಇರುವುದು ಈ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಈ ವೇಳೆ, ಅವರ ಮುಖದ ಒಂದು ಬದಿಯನ್ನು ಮಾತ್ರ ವಿಡಿಯೊದಲ್ಲಿ ಕಾಣಬಹುದಾಗಿದೆ.

ಈ ವಿಡಿಯೊದಲ್ಲಿ ಸೀರೆ ಧರಿಸಿದ್ದ ಮಹಿಳೆಯೊಬ್ಬರು ಅವರೆದುರು ನಿಂತಿದ್ದಾರೆ. ಬಳಿಕ, ವಕೀಲರು ಆ ಮಹಿಳೆಯ ಕೈಯನ್ನು ಸೆಳೆದುಕೊಳ್ಳಲು ಮುಂದಾದಂತೆ ಕಂಡು ಬಂದಿದ್ದು, ಆಕೆಯನ್ನು ತಮ್ಮ ಸನಿಹಕ್ಕೆ ಎಳೆದುಕೊಂಡಿದ್ದಾರೆ. ಇದರಿಂದ ಮುಜುಗರಕ್ಕೀಡಾಗಿರುವ ಮಹಿಳೆಯು ಪ್ರತಿರೋಧ ವ್ಯಕ್ತಪಡಿಸಲು ಪ್ರಯತ್ನಿಸಿದರೂ, ಆಕೆಯನ್ನು ಚುಂಬಿಸಲು ವಕೀಲರು ಮುಂದಾಗಿದ್ದಾರೆ. ಈ ವೇಳೆ, ಮಹಿಳೆಯು ಹಿಂದೆ ಸರಿದಿರುವುದನ್ನು ಕಾಣಬಹುದಾಗಿದೆ.

ವಿಡಿಯೊದಲ್ಲಿನ ವಕೀಲರು ಹಾಗೂ ಮಹಿಳೆಯ ಗುರುತು ಇನ್ನೂ ದೃಢಪಟ್ಟಿಲ್ಲ. ಈ ವೈರಲ್ ವಿಡಿಯೊದ ನೈಜತೆ ಕೂಡಾ ಇದುವರೆಗೆ ದೃಢಪಟ್ಟಿಲ್ಲ.

ಈ ವಿಡಿಯೊ ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಈ ಘಟನೆಯ ಕುರಿತು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ಮತ್ತು ಆಘಾತ ವ್ಯಕ್ತಪಡಿಸಿದ್ದು, “ನಾಚಿಕೆಗೇಡು” ಎಂದು ಓರ್ವ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

“ದೂರದಿಂದ ಕೆಲಸ ಮಾಡುವ ಪ್ರತಿಯೊಬ್ಬರೂ ತಾವು ಅನುಚಿತವಾಗಿ ನಡೆದುಕೊಳ್ಳುವಾಗ ಹೇಗೆ ಸಿಕ್ಕಿ ಬೀಳುತ್ತಾರೊ, ಹಾಗೆಯೇ ಆತ ಕೂಡಾ ಸಿಕ್ಕಿ ಬಿದ್ದಿದ್ದಾನೆ” ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

“ ದಿಲ್ಲಿ ಹೈಕೋರ್ಟ್ ವಿಚಾರಣೆಗಳೀಗ ಭಾರಿ ಮನರಂಜನೆಯಾಗಿವೆ. ಗಂಭೀರ ತೀರ್ಪಿನಿಂದ ಹಿಡಿದು, ಅಂದಾಜಿಸಲಾಗದ ನಾಟಕೀಯ ನ್ಯಾಯಾಲಯ ಕಲಾಪದವರೆಗೆ. ಇದು ಪ್ರತಿ ದಿನದ ಪ್ರದರ್ಶನವಾಗಿದೆ! ಇದನ್ನೆಲ್ಲ ಮಾಡಬೇಕಿದ್ದರೆ, ವಕೀಲರಾಗುವ ಅಗತ್ಯವೇನಿತ್ತು?” ಎಂದು ಮೂರನೆಯ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನ್ಯಾಯ ಕುರುಡಿರಬಹುದು. ಆದರೆ, ಇದೀಗ ಮೂಕವೂ ಆಗಿದ್ದು, ಆಕಸ್ಮಿಕವಾಗಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ” ಎಂದು ನಾಲ್ಕನೆಯ ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News