ಆದೇಶದ ಪುಟಗಳ ಸಂಖ್ಯೆ ಕಡಿಮೆ ಇದ್ದರೂ, ಪುಟಗಟ್ಟಲೆ ಸಂಖ್ಯೆಯ ವಕೀಲರ ಹೆಸರುಗಳು : ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಇತ್ತೀಚಿನ ಪ್ರಕರಣಗಳಲ್ಲಿ ಆದೇಶದ ಪುಟಗಳ ಸಂಖ್ಯೆ ಕಡಿಮೆ ಇದ್ದರೂ, ಪುಟಗಟ್ಟಲೆ ಸಂಖ್ಯೆಯ ವಕೀಲರ ಹೆಸರು ನಮೂದಾಗುತ್ತಿರುವುದರ ಕುರಿತು ಗುರುವಾರ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಒಂದು ವೇಳೆ ವಕೀಲರೇನಾದರೂ ನ್ಯಾಯಾಲಯಕ್ಕೆ ಪರಿಣಾಮಕಾರಿಯಾಗಿ ನೆರವು ನೀಡುತ್ತಿದ್ದರೆ, ಅವರ ಹೆಸರನ್ನು ಸೇರ್ಪಡೆ ಮಾಡಲು ನ್ಯಾಯಾಲಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ನ್ಯಾ. ಬೇಲಾ ಎಂ. ತ್ರಿವೇದಿ ಹಾಗೂ ನ್ಯಾ. ಸತೀಶ್ ಚಂದ್ರ ಶರ್ಮ ಅವರನ್ನೊಳಗೊಂಡ ನ್ಯಾಯಪೀಠವು ಅಭಿಪ್ರಾಯ ಪಟ್ಟಿತು.
“ವಕೀಲರ ಹೆಸರುಗಳು 10 ಪುಟಗಳವರೆಗೆ ಹೋಗುತ್ತಿದ್ದರೆ, ಆದೇಶವು ಕೆಲವೇ ಪುಟಗಳಲ್ಲಿರುತ್ತದೆ. ವಕೀಲರ ಹೆಸರು ಹೇಗೆ ಆದೇಶದಲ್ಲಿ ಸೇರ್ಪಡೆ ಮಾಡಬೇಕು ಎಂಬ ಆಧಾರದಲ್ಲಿ ನಾವು ಆದೇಶಗಳನ್ನು ನೀಡುತ್ತಿಲ್ಲ. ನೀವು ಬಾರ್ ಅನ್ನು ಪ್ರತಿನಿಧಿಸುತ್ತಿರುವುದರಿಂದ, ನಾವು ನಿಮ್ಮ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದೇವೆ” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ವಾದಿಗಳ ವಕೀಲರಾಗಿ ಹಲವಾರು ವಕೀಲರು ನ್ಯಾಯಾಲಯಕ್ಕೆ ಹಾಜರಾದರೂ, ವಾದ ಮಾಡಿ ಎಂದಾಗ ಯಾರೂ ಕೂಡಾ ವಾದ ಮಾಡುತ್ತಿಲ್ಲ ಎಂದೂ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿತು.
“ನಾವು ನಿಮಗೆ ಇಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ವಕೀಲರೊಂದಿಗೆ ಯಾರೆಲ್ಲ ಸಂಬಂಧಪಟ್ಟಿದ್ದಾರೆ ಅವರ ಹೆಸರುಗಳು ಆದೇಶದಲ್ಲಿವೆ. ಈ ರೀತಿ ಮಾಡಲು ಸಾಧ್ಯವಿಲ್ಲ. ಯಾರಾದರೂ ನಿಮಗೆ ಪರಿಣಾಮಕಾರಿಯಾಗಿ ನೆರವು ನೀಡುತ್ತಿದ್ದರೆ, ಅಂಥವರ ಹೆಸರು ಅಲ್ಲಿರುವಂತೆ ನಾವು ನೋಡಿಕೊಳ್ಳುತ್ತೇವೆ. ನಾವು ಆದೇಶಗಳನ್ನು ಹೊರಡಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನುದ್ದೇಶಿಸಿ ನ್ಯಾಯಾಲಯ ಹೇಳಿತು.