ಜಮ್ಮುಕಾಶ್ಮೀರದ ರಜೌರಿಯಲ್ಲಿ ನಿಗೂಢ ಕಾಯಿಲೆ ಉಲ್ಬಣ: ವೈದ್ಯರ ರಜೆ ರದ್ದು
Photo: PTI
ರಜೌರಿ/ಜಮ್ಮು: ನಿಗೂಢ ರೋಗದಿಂದ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಬಧಾಲ್ ಗ್ರಾಮದಲ್ಲಿ 17 ಮಂದಿ ಮೃತಪಟ್ಟಿರುವುದರಿಂದ, ವೈದ್ಯಕೀಯ ಮುನ್ನೆಚ್ಚರಿಕೆ ಘೋಷಿಸಲಾಗಿದ್ದು, ವೈದ್ಯರ ರಜೆಗಳನ್ನು ಪ್ರಾಧಿಕಾರಗಳು ರದ್ದುಗೊಳಿಸಿವೆ. ಕ್ವಾರಂಟೈನ್ ಗೆ ಕಳಿಸಿರುವ ಜನರ ಸಂಖ್ಯೆ 230ಕ್ಕೆ ಏರಿಕೆಯಾಗಿದೆ.
ಲಕ್ನೊದಲ್ಲಿನ ವಿಷ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆದಿರುವ ತನಿಖೆಯ ಪ್ರಕಾರ, ಈ ಸಾವುಗಳಿಗೆ ಯಾವುದೇ ಬ್ಯಾಕ್ಟೀರಿಯ ಅಥವಾ ವೈರಸ್ ಸೋಂಕು ಕಾರಣವಲ್ಲ; ಬದಲಿಗೆ, ವಿಷ ಕಾರಣ ಎಂದು ತಿಳಿದು ಬಂದಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಶುಕ್ರವಾರ ರಜೌರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಜೌರಿ ಸರಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಅಮರ್ ಜೀತ್ ಸಿಂಗ್ ಭಾಟಿಯಾ, ಎಲ್ಲ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದ್ದರು. “ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಮೂರು ಕುಟುಂಬಗಳ 17 ಮಂದಿ ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಚಳಿಗಾಲದ ರಜೆಯನ್ನೂ ರದ್ದುಗೊಳಿಸಲಾಗಿದೆ” ಎಂದು ಅವರು ಹೇಳಿದ್ದರು.
ಬಿಗಡಾಯಿಸಿರುವ ಆರೋಗ್ಯ ಪರಿಸ್ಥಿತಿಗೆ ನೆರವು ನೀಡಲು ಜಮ್ಮು ಮತ್ತು ಕಾಶ್ಮೀರ ಸರಕಾರವು 10 ಮಂದಿ ಹೆಚ್ಚುವರಿ ವೈದ್ಯಕೀಯ ವಿದ್ಯಾರ್ಥಿಗಳನ್ನು ರಜೌರಿ ಸರಕಾರಿ ವೈದ್ಯಕೀಯ ಕಾಲೇಜಿಗೆ ನಿಯೋಜಿಸಿದೆ ಎಂದೂ ಅವರು ತಿಳಿಸಿದ್ದರು.
ರಜೌರಿಯ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಚಂಡೀಗಢದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗುತ್ತಿರುವ ಮೂವರು ಮಂದಿಯ ಆರೋಗ್ಯ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಮೂವರು ಸಹೋದರಿಯರು ಸೇರಿದಂತೆ ನಾಲ್ವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಬುಧವಾರ ಮೂವರನ್ನು ಏರ್ಲಿಫ್ಟ್ ಮೂಲಕ ಜಮ್ಮುವಿನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದೆ.