“ಆಟಗಾರರೂ ಪಾಠ ಕಲಿಯಬೇಕು” : ಆಸ್ಟ್ರೇಲಿಯಾ ಕ್ರಿಕೆಟಿಗರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಮಧ್ಯಪ್ರದೇಶ ಸಚಿವ ವಿವಾದಾತ್ಮಕ ಹೇಳಿಕೆ!
Photo | indiatoday
ಇಂದೋರ್ : ಆಸ್ಟ್ರೇಲಿಯಾದ ಇಬ್ಬರು ಪ್ರಸಿದ್ಧ ಮಹಿಳಾ ಕ್ರಿಕೆಟಿಗರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ಕೈಲಾಶ್ ವಿಜಯವರ್ಗಿಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಈ ಘಟನೆ ಆಟಗಾರರಿಗೂ ಸೇರಿದಂತೆ ಎಲ್ಲರಿಗೂ ಪಾಠವಾಗಬೇಕು. ಆಟಗಾರರು ತಮ್ಮ ಜನಪ್ರಿಯತೆಯ ಪ್ರಮಾಣವನ್ನು ಅರಿತುಕೊಳ್ಳಬೇಕು. ಅವರು ಎಲ್ಲಿಗೆ ಹೊರಟರೂ ಸ್ಥಳೀಯ ಆಡಳಿತ ಅಥವಾ ಭದ್ರತಾ ಸಿಬ್ಬಂದಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಕ್ರಿಕೆಟ್ ಆಟಗಾರ ಬಗ್ಗೆ ಬಹಳಷ್ಟು ಕ್ರೇಝ್ ಇದೆ. ಇಂಗ್ಲೆಂಡ್ ನಲ್ಲಿ ಫುಟ್ಬಾಲ್‌ನಷ್ಟೇ ಜನಪ್ರಿಯತೆ ಕ್ರಿಕೆಟಿಗೂ ಇದೆ. ಇಂಗ್ಲೆಂಡ್ ನ ಒಂದು ಹೋಟೆಲ್‌ನಲ್ಲಿ ನಾವು ಕಾಫಿ ಕುಡಿಯುತ್ತಾ ಕುಳಿತಿದ್ದೆವು. ಆ ವೇಳೆ ಅಲ್ಲಿಗೆ ಒಬ್ಬ ಜನಪ್ರಿಯ ಫುಟ್ಬಾಲ್ ಆಟಗಾರ ಬಂದಿದ್ದ. ಕೆಲವರು ಆಟೋಗ್ರಾಫ್ ಗೆ ಮುಗಿಬಿದ್ದರು. ಒಬ್ಬ ಹುಡುಗಿ ಆತನಿಗೆ ಮುತ್ತಿಕ್ಕಿದಳು. ಈ ವೇಳೆ ಆತನ ಬಟ್ಟೆ ಹರಿದರು", ಎಂದು ವಿಜಯವರ್ಗಿಯ ಹೇಳಿದ್ದಾರೆ.
ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರ ಮೇಲೆ ಇಂದೋರ್‌ನ ಹೋಟೆಲ್ ಬಳಿ ಬೈಕ್ ಸವಾರನಿಂದ ಲೈಂಗಿಕ ಕಿರುಕುಳಕ್ಕೊಳ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ವಿಜಯವರ್ಗಿಯ ಅವರ ಈ ಪ್ರತಿಕ್ರಿಯೆ ವಿರೋಧಪಕ್ಷಗಳು ಹಾಗೂ ಮಹಿಳಾ ಪರ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಕೀಲ್ ಅಲಿಯಾಸ್ ನೈತ್ರಾ ಎಂಬಾತನನ್ನು ಬಂಧಿಸಲಾಗಿದೆ.
ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಆತಿಥ್ಯ ವಹಿಸಿರುವ ಭಾರತದಲ್ಲಿ ಈ ಘಟನೆ ನಡೆದಿರುವುದು ಕ್ರೀಡಾ ಕ್ಷೇತ್ರದಲ್ಲಿ ಆಘಾತದ ಅಲೆ ಉಂಟುಮಾಡಿದೆ.
“ಭದ್ರತಾ ಲೋಪವಿದ್ದರೂ ಆಟಗಾರರೂ ಜವಾಬ್ದಾರರು. ಅವರು ಯಾರಿಗೂ ತಿಳಿಸದೆ ಹೊರಟಿದ್ದರು. ಇಂತಹ ಘಟನೆಗಳು ಎಲ್ಲರಿಗೂ ಪಾಠವಾಗಬೇಕು,” ಎಂದು NDTVಯೊಂದಿಗೆ ಮಾತನಾಡಿದ ಸಚಿವ ವಿಜಯವರ್ಗಿಯ ಹೇಳಿದ್ದರು.
ಸಚಿವರ ಹೇಳಿಕೆಯು ‘ಸಂತ್ರಸ್ತರನ್ನು ದೂಷಿಸುವ ನಿಲುವು’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಕಾಂಗ್ರೆಸ್ ಹಿರಿಯ ನಾಯಕ ಅರುಣ್ ಯಾದವ್ ಈ ಕುರಿತು ಪ್ರತಿಕ್ರಿಯಿಸುತ್ತಾ, “ರಾಜ್ಯ ತನ್ನ ಅತಿಥಿಗಳನ್ನು ರಕ್ಷಿಸಲು ವಿಫಲವಾಗಿದೆ. ಸಚಿವರ ಹೇಳಿಕೆ ಅಸಹ್ಯಕರ. ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಸರಕಾರ ಹೆಚ್ಚಿನ ಕಾಳಜಿ ತೋರಿಸಬೇಕಾಗಿತ್ತು,” ಎಂದು ಹೇಳಿದ್ದಾರೆ.
“ಆಟಗಾರರಿಗೆ ಎಲ್ಲೆಡೆ ಭದ್ರತೆ ಒದಗಿಸುವುದು ಅಸಾಧ್ಯ. ಆದಾಗ್ಯೂ, ಅವರು ಎಚ್ಚರಿಕೆಯಿಂದಿರಬೇಕು ಎಂಬ ಮಾತು ತಪ್ಪಲ್ಲ. ಆದರೆ ರಾಜ್ಯದ ಜವಾಬ್ದಾರಿಯನ್ನೂ ನಿರ್ಲಕ್ಷಿಸಬಾರದು" ಎಂದು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಸಂಜಯ್ ಜಗದಾಳೆ ಹೇಳಿದ್ದಾರೆ.
ವಿಜಯವರ್ಗಿಯ ಅವರು ಮಹಿಳೆಯರ ಉಡುಪು ಮತ್ತು ನಡವಳಿಕೆ ಕುರಿತು ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿಂದೆ ಅವರು “ನನಗೆ ಕಡಿಮೆ ಬಟ್ಟೆ ಧರಿಸುವ ಹುಡುಗಿಯರು ಇಷ್ಟವಿಲ್ಲ,” ಹಾಗೂ “ಹುಡುಗಿಯರು ಸೆಲ್ಫಿ ತೆಗೆದುಕೊಳ್ಳಲು ಬಂದಾಗ ಸರಿಯಾದ ಬಟ್ಟೆಯಲ್ಲಿ ಬಾ ಎಂದು ಹೇಳುತ್ತೇನೆ,” ಎಂಬ ಹೇಳಿಕೆಗಳಿಂದಲೂ ಆಕ್ರೋಶಕ್ಕೆ ಗುರಿಯಾಗಿದ್ದರು.