ಲೋಕಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ | ನಮ್ಮ ಬಳಿ 100 ಶೇ. ಪುರಾವೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ, ಆ. 2: 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೃಹತ್ ಪ್ರಮಾಣದಲ್ಲಿ ಚುನಾವಣಾ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಏರ್ಪಡಿಸಿದ ವಾರ್ಷಿಕ ಕಾನೂನು ಸಮಾವೇಶ 2025ರಲ್ಲಿ ಮಾತನಾಡಿದ ಅವರು, ‘‘ಲೋಕಸಭಾ ಚುನಾವಣೆಯಲ್ಲಿ ಹೇಗೆ ಅವ್ಯವಹಾರ ನಡೆಸಬಹುದು ಮತ್ತು ಹೇಗೆ ಅವ್ಯವಹಾರ ನಡೆಸಲಾಯಿತು ಎನ್ನುವುದನ್ನು ನಾವು ಸಾಬೀತುಪಡಿಸಲಿದ್ದೇವೆ. ನನ್ನ ಬಳಿ 100 ಶೇಕಡ ಪುರಾವೆಯಿರುವುದರಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಈ ಪುರಾವೆಯನ್ನು ನಾನು ಯಾರಿಗೆಲ್ಲ ತೋರಿಸಿರುವೆನೋ, ಅವರು ಆಘಾತಗೊಂಡು ಅಕ್ಷರಶಃ ತಮ್ಮ ಕುರ್ಚಿಗಳಿಂದ ಕೆಳಗೆ ಬಿದ್ದಿದ್ದಾರೆ’’ ಎಂದು ಹೇಳಿದರು.
ಚುನಾವಣಾ ಅಕ್ರಮದಲ್ಲಿ ಭಾರತೀಯ ಚುನಾವಣಾ ಆಯೋಗವು ಶಾಮೀಲಾಗಿರುವುದನ್ನು ತೋರಿಸುವ ಪುರಾವೆಯ ‘‘ಪರಮಾಣು ಬಾಂಬ್’’ನ್ನು ಪ್ರತಿಪಕ್ಷಗಳು ಪತ್ತೆಹಚ್ಚಿವೆ ಎಂದು ಹೇಳಿದ ಒಂದು ದಿನದ ಬಳಿಕ ರಾಹುಲ್ ಈ ಹೇಳಿಕೆ ನೀಡಿದ್ದಾರೆ.
‘‘ಚುನಾವಣಾ ಆಯೋಗದಿಂದ ಯಾವುದೇ ಸಹಕಾರ ಸಿಗದಿದ್ದಾಗ ನಾವು ತನಿಖೆಗೆ ಇಳಿದೆವು. ಆಗ ನಮಗೆ ಪರಮಾಣು ಬಾಂಬೇ ಸಿಕ್ಕಿತು. ಅದು ಸ್ಫೋಟಗೊಂಡಾಗ ಭಾರತೀಯ ಚುನಾವಣಾ ಆಯೋಗ ಹೇಳಹೆಸರಿಲ್ಲದಂತಾಗುತ್ತದೆ’’ ಎಂದು ಶುಕ್ರವಾರ ಸಂಸತ್ ನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದ್ದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರದಲ್ಲಿ ಗಮನಾರ್ಹ ನಿರ್ವಹಣೆ ನೀಡಿತ್ತು. ಆದರೆ, ಅದಾದ ಕೆಲವೇ ತಿಂಗಳುಗಳ ಬಳಿಕ ಆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ‘‘ನಾಮಾವಶೇಷಗೊಂಡಿತು’’. ಆಗ ಕಾಂಗ್ರೆಸ್ ಚುನಾವಣಾ ಪ್ರಕ್ರಿಯೆಯನ್ನು ಪರಿಶೀಲಿಸಲು ಆರಂಭಿಸಿತು ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದರು.
‘‘ಅಲ್ಲೊಂದು ಮಾದರಿ ಇತ್ತು. ಅದು ಸಂಶಯಕ್ಕೆ ಕಾರಣವಾಯಿತು. ಆಗ ಸ್ವತಂತ್ರ ತನಿಖೆಯೊಂದನ್ನು ಕೈಗೆತ್ತಿಕೊಂಡೆವು. ತನಿಖೆಯು ಆರು ತಿಂಗಳುಗಳ ಕಾಲ ಸಾಗಿತು’’ ಎಂದರು.
‘‘ಚುನಾವಣಾ ಆಯೋಗ ಎನ್ನುವ ಸಂಸ್ಥೆಯೊಂದು ಅಸ್ತಿತ್ವದಲ್ಲೇ ಇಲ್ಲ, ಅದು ನಾಪತ್ತೆಯಾಗಿದೆ ಎನ್ನುವುದನ್ನು ನಮ್ಮ ಪುರಾವೆಯು ದೇಶಕ್ಕೆ ತೋರಿಸಲಿದೆ’’ ಎಂದು ರಾಹುಲ್ ಗಾಂಧಿ ಹೇಳಿಕೊಂಡರು. ಸುದೀರ್ಘ ಒತ್ತಡದ ಬಳಿಕವಷ್ಟೇ, ಮಹಾರಾಷ್ಟ್ರದ ಮತದಾರ ಪಟ್ಟಿಯ ‘‘ಸ್ಕ್ಯಾನ್ ನಿರೋಧಕ’’ ಮುದ್ರಿತ ಪ್ರತಿಗಳನ್ನು ನೀಡಲಾಯಿತು; ನಾವು ಕೇಳಿದಂತೆ ಡಿಜಿಟಲ್ ದತ್ತಾಂಶಗಳನ್ನು ಅವರು ಕೊಟ್ಟಿಲ್ಲ’’ ಎಂದರು.
ಚಲಾವಣೆಯಾದ 6.5 ಲಕ್ಷ ಮತಗಳ ಪೈಕಿ 1.5 ಲಕ್ಷ ಮತಗಳು ನಕಲಿಯಾಗಿದ್ದವು ಎಂದು ರಾಹುಲ್ ಆರೋಪಿಸಿದ್ದಾರೆ. ‘‘70ರಿಂದ 100 ಸ್ಥಾನಗಳಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬುದಾಗಿ ನಾವು ಭಾವಿಸಿದ್ದೇವೆ. ಈ ಅವ್ಯವಹಾರಗಳು ನಡೆಯದೇ ಇರುತ್ತಿದ್ದರೆ ಇಂದು ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುತ್ತಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.