ಬುಡಕಟ್ಟು ಪ್ರದೇಶಗಳಲ್ಲಿ ಅಪೌಷ್ಟಿಕತೆಯಿಂದ ಶಿಶು ಮರಣ: ಲೋಕಸಭೆಯಲ್ಲಿ ಉತ್ತರಿಸದೆ ನುಣುಚಿಕೊಂಡ ಕೇಂದ್ರ ಸರಕಾರ
ಸಾಂದರ್ಭಿಕ ಚಿತ್ರ | Photo Credit : NDTV
ಹೊಸದಿಲ್ಲಿ: ದೇಶದ ಬುಡಕಟ್ಟು ಸಮುದಾಯದ ಪ್ರದೇಶಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಅಪೌಷ್ಟಿಕತೆಯಿಂದಾಗಿ ಮೃತಪಟ್ಟ ಶಿಶುಗಳ ಸಂಖ್ಯೆಯ ಕುರಿತು ಲೋಕಸಬೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸರಕಾರವು ಗುರುವಾರ ಉತ್ತರಿಸದೆ ನುಣುಚಿಕೊಂಡಿದೆ.
ತೃಣಮೂಲ ಕಾಂಗ್ರೆಸ್ ಸದಸ್ಯ ಸೌಗತಾ ರೇ ಅವರು ಈ ಬಗ್ಗೆ ನೇರವಾಗಿ ಕೇಳಿದ ಪ್ರಶ್ನೆಗೆ, ಕೇಂದ್ರ ಬುಡಕಟ್ಟು ಖಾತೆಯ ಸಹಾಯಕ ಸಚಿವ ದುರ್ಗಾದಾಸ್ ಉಯಿಕೆ ಅವರು ನೀಡಿದ ನಾಲ್ಕು ಪುಟಗಳ ಉತ್ತರದಲ್ಲಿ, ಸರಕಾರವು ಎಲ್ಲಾ ವರ್ಗದ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಹಮ್ಮಿಕೊಂಡಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ವಿವರಿಸಿದ್ದಾರೆ. ಇದರ ಜೊತೆಗೆ ಈಗಾಗಲೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)ಯ ಮೂಲಕ ಲಭ್ಯವಿರು ಶಿಶುಗಳ ಕುಬ್ಜತೆ, ಕಡಿಮೆ ದೇಹತೂಕದ ಕುರಿತ ದತ್ತಾಂಶಗಳು ಮತ್ತು ಅಪೌಷ್ಟಿಕತೆಯಿಂದಾಗಿ ಸಂಭವಿಸುವ ಶಿಶುಗಳ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಲು ಜಾರಿಗೊಳಿಸಲಾದ ಮಾರ್ಗಸೂಚಿಗಳನ್ನ್ನು ವಿವರಿಸಿದರು. ಆದರೆ ಬುಡಕಟ್ಟು ಪ್ರದೇಶಗಳಲ್ಲಿ ಅಪೌಷ್ಟಿಕತೆಯಿಂದ ಸಾವನ್ನಪ್ಪಿದ ಶಿಶುಗಳ ಸಂಖ್ಯೆಯ ಬಗ್ಗೆ ಬುಡಕಟ್ಟು ವ್ಯವಹಾರಗಳ ಖಾತೆಯ ಸಹಾಯಕ ಸಚಿವ ದುರ್ಗಾದಾಸ್ ಉಯಿಕೆ ಸದನಕ್ಕೆ ಯಾವುದೇ ಮಾಹಿತಿ ನೀಡಲಿಲ್ಲ.
1990-91ರಿಂದೀಚೆಗೆ ಎಲ್ಲಾ ಮಕ್ಕಳ ಅಪೌಷ್ಟಿತೆಯ ಸೂಚಕಗಳಲ್ಲಿ ಸುಧಾರಣೆ ಕಂಡುಬಂದಿರುವುದಾಗಿ ದುರ್ಗಾದಾಸ್ ಅವರು ಎನ್‌ಎಫ್‌ಎಚ್‌ಎಸ್ ಸಮೀಕ್ಷೆಯ ದತ್ತಾಂಶಗಳನ್ನು ಉಲ್ಲೇಖಿಸುತ್ತಾ ತಿಳಿಸಿದರು.
ಅಕ್ಟೋಬರ್ 2025ರವರೆಗೆ ದೇಶಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಐದು ವರ್ಷದೊಳಗಿನ ಕೇವಲ 6.60 ಕೋಟಿ ಮಕ್ಕಳು ದಾಖಲಾಗಿದ್ದು, ಈವರ ಪೈಕಿ ಆರೋಗ್ಯ ತಪಾಸಣೆಗೊಳಗಾದ 6.44 ಕೋಟಿ ಮಕ್ಕಳಲ್ಲಿ ಕನಿಷ್ಠ ಶೇ.52ರಷ್ಟು ಮಂದಿ ಕುಬ್ಜತೆ ಅಥವಾ ಕಡಿಮೆ ದೇಹತೂಕವನ್ನು ಹೊಂದಿದ್ದಾರೆಂದು ಸಚಿವರು ತಿಳಿಸಿದರು. ಎನ್‌ಎಫ್‌ಎಚ್‌ಎಸ್ ದತ್ತಾಂಶ ಹಾಗೂ ಪೋಷಣ್ ಟ್ರ್ಯಾಕರ್‌ನ ದತ್ತಾಂಶಗಳ ವಿಶ್ಲೇಷಣೆಯಿಂದ ದೇಶಾದ್ಯಂತ ಮಕ್ಕಳ ಅಪೌಷ್ಟಿಕತೆಯ ಸೂಚಕಗಳಲ್ಲಿ ಸುಧಾರಣೆಯಾಗಿರುವುದು ಕಂಡುಬಂದಿದೆ’’ ದುರ್ಗಾದಾಸ್ ಉಯಿಕೆ ಸದನಕ್ಕೆ ತಿಳಿಸಿದರು.