×
Ad

ಭಗವಾನ್ ಹನುಮಂತ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲಿಗ: ಅನುರಾಗ್ ಠಾಕೂರ್

ನಮ್ಮ ದೇಶ, ಪರಂಪರೆ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಪಠ್ಯಪುಸ್ತಕಗಳಾಚೆ ನೋಡಬೇಕು ಎಂದ ಬಿಜೆಪಿ ಸಂಸದ

Update: 2025-08-25 12:10 IST

ಅನುರಾಗ್ ಠಾಕೂರ್ (Photo:X/@ianuragthakur)

ಉನಾ: ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಪ್ರಥಮ ವ್ಯಕ್ತಿಯನ್ನಾಗಿ ಶ್ರೀ‌ ಹನುಮಾನ್‌ನನ್ನು ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳಿಗೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಹೇಳಿದ್ದಾರೆ. ಉನಾದಲ್ಲಿನ ಪಿಎಂಶ್ರೀ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಈ ಮಾತು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಎಕ್ಸ್ ಮಾಧ್ಯಮದಲ್ಲಿ ಈ ಕುರಿತು ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಹಮೀರ್ ಪುರ್ ಸಂಸದರೂ ಆದ ಅನುರಾಗ್ ಠಾಕೂರ್, ಆ ವಿಡಿಯೊಗೆ 'ಶ್ರೀ ಹನುಮಾನ್ ಪ್ರಪ್ರಥಮ ಗಗನಯಾತ್ರಿ' ಎಂಬ ಶೀರ್ಷಿಕೆ ನೀಡಿದ್ದಾರೆ. ಮುಂದುವರಿದು, "ಜಗತ್ತಿನ ಪ್ರಪ್ರಥಮ‌ ಗಗನ ಯಾತ್ರಿ ಯಾರು?" ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಆ ವಿಡಿಯೊದಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ವಿದ್ಯಾರ್ಥಿಗಳು ನೀಲ್ ಆರ್ಮ್‌ಸ್ಟ್ರಾಂಗ್ ಎಂದು ಉತ್ತರಿಸಿದ್ದಾರೆ. ಈ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಅನುರಾಗ್ ಠಾಕೂರ್, "ನನಗೆ ಶ್ರೀ ಹನುಮಾನ್ ಎನ್ನಿಸುತ್ತದೆ" ಎಂದು ಪ್ರತ್ಯುತ್ತರ ನೀಡಿದ್ದಾರೆ.

ತಮ್ಮ ಹನುಮಾನ್ ಸೂತ್ರವನ್ನು ಸಮರ್ಥಿಸಿಕೊಂಡಿರುವ ಅವರು, ವಿದ್ಯಾರ್ಥಿಗಳು ವಸಾಹತುಶಾಹಿ ನಿರೂಪಣೆಗಳಾಚೆ ನೋಡಬೇಕಾದ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ. "ನಾವು ಎಲ್ಲಿಯವರೆಗೆ ಸಾವಿರಾರು ವರ್ಷಗಳಷ್ಟು ಹಳೆಯದಾದ ಸಂಪ್ರದಾಯ, ಜ್ಞಾನ, ಸಂಸ್ಕೃತಿ ತಿಳಿಯುವುದಿಲ್ಲವೊ, ಅಲ್ಲಿಯವರೆಗೆ ನಾವು ಬ್ರಿಟಿಷರು ಏನು ತೋರಿಸಿದ್ದರೊ ಅದೇ ಆಗಿ ಉಳಿಯುತ್ತೇವೆ" ಎಂದೂ ಹೇಳಿದ್ದಾರೆ.

"ನಮ್ಮ ದೇಶದ ಬಗ್ಗೆ, ನಮ್ಮ ಪರಂಪರೆ ಮತ್ತು ಜ್ಞಾನದ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಪಠ್ಯಪುಸ್ತಕಗಳಾಚೆ ನೋಡಬೇಕು ಎಂದು ನಾನು ಪ್ರಾಂಶುಪಾಲರು ಹಾಗೂ ಇಲ್ಲಿರುವ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಅದರಿಂದ ನೀವು ಇನ್ನೂ ಸಾಕಷ್ಟು ಆವಿಷ್ಕಾರ ಮಾಡುತ್ತೀರಿ" ಎಂದು ಅವರು ಹೇಳಿದ್ದಾರೆ.

ಅನುರಾಗ್ ಠಾಕೂರ್ ಅವರ ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯಿಸಿರುವ ಡಿಎಂಕೆ ಸಂಸದೆ ಕನಿಮೋಳಿ, ಅನುರಾಗ್ ಠಾಕೂರ್ ಪುರಾಣ ಹಾಗೂ ವಿಜ್ಞಾನದ ನಡುವಿನ ಗೆರೆಯನ್ನು ಮಂಕಾಗಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

"ತರಗತಿಯ ಕೋಣೆಗಳಲ್ಲಿ ಯುವ ಮನಸ್ಸುಗಳನ್ನು ದಾರಿ ತಪ್ಪಿಸುವುದು ಸಂವಿಧಾನದಲ್ಲಿ ಅಡಕ ಮಾಡಲಾಗಿರುವ ಜ್ಣಾನ, ಕಾರ್ಯಕಾರಣ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಎಸಗುವ ಅವಮಾನವಾಗಿದೆ" ಎಂದು ಅವರು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News