ನನಗೆ ಕಿರುಕುಳ ನೀಡುವ ದುರುದ್ದೇಶದಿಂದ ವರ್ಗಾವಣೆ ಮಾಡಲಾಗಿತ್ತು: ಬೀಳ್ಕೊಡುಗೆ ಸಮಾರಂಭದಲ್ಲಿ ಮಧ್ಯ ಪ್ರದೇಶ ಹೈಕೋರ್ಟ್ ನ್ಯಾಯಾಧೀಶರ ಆರೋಪ
PC : Source: YT/ MP High Court \ indianexpress.com
ಭೋಪಾಲ್: “ನನಗೆ ಕಿರುಕುಳ ನೀಡುವ ದುರುದ್ದೇಶದಿಂದ ನನ್ನನ್ನು ವರ್ಗಾವಣೆ ಮಾಡಲಾಗಿತ್ತು, ನನ್ನನ್ನು ಪಿತೂರಿಯ ಭಾಗವಾಗಿ ವಿಚಾರಣೆಗೊಳಪಡಿಸಿದ್ದರಿಂದಾಗಿ, ನನ್ನ ಕುಟುಂಬವು ಮೌನವಾಗಿ ನೋವು ಅನುಭವಿಸುವಂತಾಯಿತು” ಎಂದು ಮಧ್ಯಪ್ರದೇಶ ಹೈಕೋರ್ಟ್ ನ ಇಂದೋರ್ ನ್ಯಾಯಪೀಠದಿಂದ ನಿವೃತ್ತಗೊಂಡಿರುವ ನ್ಯಾ. ದುಪ್ಪಲ ವೆಂಕಟ ರಮಣ ಅವರು ಮಂಗಳವಾರ ನಡೆದ ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೂ ಮುನ್ನ, ಆಂಧ್ರ ಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶರಾಗಿದ್ದ ದುಪ್ಪಲ ವೆಂಕಟ ರಮಣ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಗೆ ವರ್ಗಾಯಿಸುವಂತೆ ಆಗಸ್ಟ್ 2023ರಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು.
ಆದರೆ, ತಮ್ಮ ವರ್ಗಾವಣೆ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು ಹಾಗೂ ತಮ್ಮನ್ನು ಮಧ್ಯಪ್ರದೇಶ ಹೈಕೋರ್ಟ್ ಬದಲು ಕರ್ನಾಟಕ ಹೈಕೋರ್ಟ್ ಗೆ ವರ್ಗಾಯಿಸಬೇಕು ಎಂದು ನ್ಯಾ. ದುಪ್ಪಲ ವೆಂಕಟ ರಮಣ ಅವರು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಮನವಿ ಮಾಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಕೊಲಿಜಿಯಂ, ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಗೆ ಖಾಯಂ ನ್ಯಾಯಾಧೀಶರನ್ನಾಗಿ ವರ್ಗಾಯಿಸಬೇಕು ಎಂಬ ತನ್ನ ಶಿಫಾರಸನ್ನು ಪುನರುಚ್ಚರಿಸಿತ್ತು.
“ಯಾವುದೇ ಕಾರಣವಿಲ್ಲದೆ ನನ್ನನ್ನು ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಪೀಠದಿಂದ ಮಧ್ಯಪ್ರದೇಶ ಹೈಕೋರ್ಟ್ ನ ಇಂದೋರ್ ನ್ಯಾಯಪೀಠಕ್ಕೆ ವರ್ಗಾಯಿಸಲಾಯಿತು. ನಾನು ಆಯ್ಕೆಗಾಗಿ ಮನವಿ ಮಾಡಿದ್ದೆ. ನನ್ನ ಪತ್ನಿಗೆ ಉತ್ತಮ ಚಿಕಿತ್ಸೆ ದೊರೆಯಲಿ ಎಂಬ ಬಯಕೆಯಿಂದ ನಾನು ಕರ್ನಾಟಕ ಹೈಕೋರ್ಟ್ ಅನ್ನು ಆಯ್ಕೆ ಮಾಡಿದ್ದೆ. ಆದರೆ, ಈ ಮನವಿಯನ್ನು ಮಾನ್ಯ ಸುಪ್ರೀಂ ಕೋರ್ಟ್ ಪರಿಗಣಿಸಲಿಲ್ಲ” ಎಂದು ಮಧ್ಯಪ್ರದೇಶ ಹೈಕೋರ್ಟ್ ನ ಇಂದೋರ್ ನ್ಯಾಯಪೀಠದಿಂದ ಮಂಗಳವಾರ ನಿವೃತ್ತರಾದ ನ್ಯಾ. ದುಪ್ಪಲ ವೆಂಕಟ ರಮಣ ಖೇದ ವ್ಯಕ್ತಪಡಿಸಿದರು.
“ಪ್ಯಾರಾಕ್ಸಿಸ್ಮಲ್ ನಾನ್ ಎಪಿಲೆಪ್ಟಿಕ್ ಸೀಷರ್ಸ್ ಕಾಯಿಲೆಯಿಂದ ಬಳಲುತ್ತಿದ್ದ ನನ್ನ ಪತ್ನಿಯ ವೈದ್ಯಕೀಯ ಸ್ಥಿತಿ ಹಾಗೂ ಕೋವಿಡ್ ಸಾಂಕ್ರಾಮಿಕದಿಂದಾಗಿ ಆಕೆಗುಂಟಾಗಿದ್ದ ಮಿದುಳು ದೌರ್ಬಲ್ಯದ ಆಧಾರದಲ್ಲಿ ನಾನು ನನ್ನ ವರ್ಗಾವಣೆಯನ್ನು ಕೋರಿದ್ದೆ. ಆದರೆ, ಆಗಿನ ಮುಖ್ಯ ನ್ಯಾಯಮೂರ್ತಿಗಳ ಅವಧಿಯಲ್ಲಿ ನನ್ನ ಮನವಿಯನ್ನು ಪರಿಗಣಿಸಲೂ ಇಲ್ಲ ಅಥವಾ ತಿರಸ್ಕರಿಸಲೂ ಇಲ್ಲ. ನಾನು ಮತ್ತೊಂದು ಮನವಿಯನ್ನು ರವಾನಿಸಿದೆನಾದರೂ, ಅದಕ್ಕೂ ನಾನು ಯಾವುದೇ ಪ್ರತಿಕ್ರಿಯೆನ್ನು ಸ್ವೀಕರಿಸಲಿಲ್ಲ. ನನ್ನಂತಹ ನ್ಯಾಯಾಧೀಶರು ಸಕಾರಾತ್ಮಕ ಮಾನವೀಯ ಪರಿಗಣನೆಯನ್ನು ನಿರೀಕ್ಷಿಸುತ್ತೇವೆ. ಆದರೆ, ನನ್ನ ಹೃದಯ ಒಡೆದು ಹೋಯಿತು ಹಾಗೂ ತೀವ್ರ ಘಾಸಿಯಾಯಿತು. ನನಗೆ ಕಿರುಕುಳ ನೀಡುವ ದುರುದ್ದೇಶದಿಂದ ನನಗೆ ವರ್ಗಾವಣೆ ಆದೇಶವನ್ನು ನೀಡಲಾಗಿತ್ತು ಎಂದು ನನಗನ್ನಿಸುತ್ತಿದೆ. ಆದರೆ, ದೇವರು ಇದನ್ನು ಅಷ್ಟು ಸುಲಭವಾಗಿ ಮರೆಯವುದಿಲ್ಲ ಅಥವಾ ಕ್ಷಮಿಸುವುದೂ ಇಲ್ಲ” ಎಂದು ಅವರು ಅಸಮಾಧಾನ ಹೊರ ಹಾಕಿದರು.