ʼಮಧ್ಯಪ್ರದೇಶದಲ್ಲಿ ಪೊಲೀಸ್ - ಮಾಫಿಯಾ ನಂಟುʼ | ಹಿರಿಯ ಅಧಿಕಾರಿಗಳ ಕಿರುಕುಳ, ಮರಳು ಮಾಫಿಯಾದಿಂದ ಬೆದರಿಕೆ ಆರೋಪ: ಎಎಸ್‌ಐ ಆತ್ಮಹತ್ಯೆ
ಪ್ರಮೋದ್ ಪವನ್ (Photo: indiatoday.in)
ಡಾಟಿಯಾ (ಮ.ಪ್ರ.): ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 51 ವರ್ಷದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಪ್ರಮೋದ್ ಪವನ್ ಅವರು, ಹಿರಿಯ ಪೊಲೀಸ್ ಅಧಿಕಾರಿಗಳ ಮಾನಸಿಕ ಕಿರುಕುಳ ಮತ್ತು ಮರಳು ಮಾಫಿಯಾದ ಜೀವ ಬೆದರಿಕೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜುಲೈ 21ರಂದು ಗೊಂಡನ್ ಪೊಲೀಸ್ ಠಾಣೆಯ ವಸತಿಗೃಹದಲ್ಲಿ ಅವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ಕೆಲವೇ ಗಂಟೆಗಳ ಮುಂಚೆ ಅವರು ರೆಕಾರ್ಡ್ ಮಾಡಿದ್ದ ವೀಡಿಯೋಗಳು ಮತ್ತು ಡೆತ್ ನೋಟ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವಿಡಿಯೋ ಮಾಡುವ ವೇಳೆ ಅವರು ಪೋಲಿಸ್ ಸಮವಸ್ತ್ರ ಧರಿಸಿದ್ದರು.
ಆತ್ಮಹತ್ಯೆಗೂ ಮೊದಲು ಎಎಸ್‌ಐ ಪವನ್, ಗೊಂಡನ್ ಠಾಣೆಯ ಇನ್ ಚಾರ್ಜ್ ಅರವಿಂದ್ ಭದೌರಿಯಾ, ಚಾಲಕ-ಕಾನ್‌ಸ್ಟೆಬಲ್ ರೂಪ್ ನಾರಾಯಣ್ ಯಾದವ್ ಹಾಗೂ ಥರೆಟ್ ಠಾಣೆಯ ಎಎಸ್‌ಐ ಅನ್ಫಾಸುಲ್ ಹಸನ್ ಮತ್ತು ಸ್ಥಳೀಯ ಮರಳು ಮಾಫಿಯಾದ ವಿರುದ್ಧ ಮಾನಸಿಕ ಕಿರುಕುಳ, ಜಾತಿ ನಿಂದನೆ ಮತ್ತು ಜೀವ ಬೆದರಿಕೆಗಳ ಆರೋಪ ಮಾಡಿದ್ದು, “ನನಗೆ ಸರಿಯಾಗಿ ಊಟ ಮಾಡಲು ಸಮಯ ನೀಡುತ್ತಿರಲಿಲ್ಲ. ಅಗತ್ಯ ಕೆಲಸಗಳನ್ನು ಮಾಡಲು ಹೊರ ಹೋಗುವುದಕ್ಕೆ ಅವಕಾಶಗಳನ್ನು ನಿರಾಕರಿಸಲಾಗಿತ್ತು. ನನ್ನ ಆಧಾರ್ ಕಾರ್ಡ್ ಅಥವಾ ಸಮಗ್ರ ಕಾರ್ಡ್ಗಳನ್ನು ಮಾಡುವುದಕ್ಕೆ ನನಗೆ ಸಮಯ ನೀಡುತ್ತಿರಲಿಲ್ಲ. ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿತ್ತು. ರಜೆ ತೆಗೆದುಕೊಳ್ಳಲು ಅವಕಾಶ ನೀಡುತ್ತಿರಲಿಲ್ಲ. ಈ ಕುರಿತಂತೆ ಎಸ್‌ಪಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲು ಅವಕಾಶ ನೀಡಲಿಲ್ಲ. ನನ್ನ ಮೇಲಿನ ಒತ್ತಡ ಹೇರಲಾಗಿತ್ತು” ಎಂದು ಆರೋಪಿಸಿದ್ದಾರೆ.
ವೀಡಿಯೋದಲ್ಲಿ ಪವನ್ ಅವರು, ಸ್ಥಳೀಯ ಮರಳು ಮಾಫಿಯಾ ನಿರ್ವಾಹಕ ಬಬ್ಲು ಯಾದವ್ ತಮ್ಮನ್ನು ಟ್ರ್ಯಾಕ್ಟರ್‌ನಿಂದ ಹರಿಸಿ ಕೊಲ್ಲುವುದಾಗಿ ಬೆದರಿಸಿದ್ದನ್ನು ಉಲ್ಲೇಖಿಸಿದ್ದಾರೆ. ಆತ ಚೆನ್ನಗೆ ಪೊಲೀಸ್ ಠಾಣೆಯ ಇನ್ ಚಾರ್ಜ್ ಗಳ ಬೆಂಬಲವಿದೆ ಎಂದು ಧೈರ್ಯದಿಂದ ಹೇಳಿಕೊಳ್ಳುತ್ತಾನೆ ಎಂದು ಅವರ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಪವನ್ ಅವರು ಜುಲೈ 2ರಂದು ಡಾಟಿಯಾ ಜಿಲ್ಲಾ ಎಸ್‌ಪಿ ಸೂರಜ್ ವರ್ಮಾ ಅವರಿಗೆ ನೀಡಿದ್ದ ಅಧಿಕೃತ ದೂರು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೂರಿನಲ್ಲಿ ಕಿರುಕುಳ, ನಿಂದನೆ ಹಾಗೂ ತಮಗೆ ಜೀವ ಬೆದರಿಕೆ ಇದೆ ಎಂಬ ವಿವರಗಳಿವೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಸೂರಜ್ ವರ್ಮಾ, “ಈ ದೂರು ‘ಇನ್‌ವರ್ಡ್ ರಿಜಿಸ್ಟರ್’ನಲ್ಲಿ ದಾಖಲಾಗಿರಬಹುದು, ಆದರೆ ನಾನು ಇದನ್ನು ನೋಡಿರಲಿಲ್ಲ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಗೊಂಡನ್ ಠಾಣೆಯ ಇನ್‌ಚಾರ್ಜ್ ಅರವಿಂದ್ ಭದೌರಿಯಾ ರನ್ನು ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.