ತಮಿಳುನಾಡು ಸಚಿವ ಪೊನ್ಮುಡಿ ವಿರುದ್ಧ ಎಫ್‌ಐಆರ್ ದಾಖಲಿಸಲು ಮದ್ರಾಸ್ ಹೈಕೋರ್ಟ್ ಆದೇಶ
ಕೆ.ಪೊನ್ಮುಡಿ | PTI
ಚೆನ್ನೈ: ಮಹಿಳೆಯರು ಮತ್ತು ಹಿಂದು ಧರ್ಮದ ಎರಡು ಪಂಥಗಳ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ತಮಿಳುನಾಡಿನ ಅರಣ್ಯ ಸಚಿವ ಕೆ.ಪೊನ್ಮುಡಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ಗುರುವಾರ ರಾಜ್ಯ ಪೋಲಿಸರಿಗೆ ಆದೇಶಿಸಿದೆ.
ಎ.6ರಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪೊನ್ಮುಡಿ ಶೈವ ಮತ್ತು ವೈಷ್ಣವ ಪಂಥಗಳ ಧಾರ್ಮಿಕ ಚಿಹ್ನೆಗಳನ್ನು ಲೈಂಗಿಕ ಭಂಗಿಗಳಿಗೆ ಹೋಲಿಸಿದ್ದ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಲೈಂಗಿಕ ಕಾರ್ಯಕರ್ತೆ ಮತ್ತು ಆಕೆಯ ಗ್ರಾಹಕನನ್ನು ಒಳಗೊಂಡ ಜೋಕ್ ಸಿಡಿಸಿದ ಸಂದರ್ಭದಲ್ಲಿ ಪೊನ್ಮುಡಿ ಮಹಿಳೆಯರು ಮತ್ತು ಹಿಂದು ಧರ್ಮದ ಪಂಥಗಳ ಕುರಿತು ಈ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ನ್ಯಾ.ಆನಂದ ವೆಂಕಟೇಶ ಅವರು ವೀಡಿಯೊ ಕುರಿತು ಕ್ರಮ ಕೈಗೊಳ್ಳದ್ದಕ್ಕಾಗಿ ಪೋಲಿಸರನ್ನು ಪ್ರಶ್ನಿಸಿದರು. ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಪೊನ್ಮುಡಿಯವರ ಖುಲಾಸೆಯನ್ನು ಪ್ರಶ್ನಿಸಿರುವ 2023ರ ಸ್ವಯಂಪ್ರೇರಿತ ಪರಿಷ್ಕರಣೆ ಅರ್ಜಿಯ ವಿಚಾರಣೆಯನ್ನು ಅವರು ನಡೆಸುತ್ತಿದ್ದರು.
ಪೊನ್ಮುಡಿಯವರ ಭಾಷಣದ ವೀಡಿಯೊ ಇನ್ನೂ ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ ಮತ್ತು ಸಚಿವರು ಕ್ಷಮೆ ಯಾಚಿಸಿದ್ದರೂ ಅದನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾ.ವೆಂಕಟೇಶ, ಸಚಿವರ ವಿರುದ್ಧ ಕೈಗೊಳ್ಳಲಾದ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸಲು ಅಡ್ವೋಕೇಟ್ ಜನರಲ್ ಪಿ.ಎಸ್.ರಾಮನ್ ಅವರಿಗೆ ಎ.21ರವರೆಗೆ ಸಮಯಾವಕಾಶ ನೀಡಿದರು.
‘ಪೋಲಿಸರು ಎಫ್‌ಐಆರ್ ದಾಖಲಿಸದಿದ್ದರೆ ನಾನು ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಕ್ರಮವನ್ನು ಆರಂಭಿಸುತ್ತೇನೆ. ಈಗ ನ್ಯಾಯಾಲಯವು ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದೆ. ಒಂದು ಎಫ್‌ಐಆರ್ ಮಾತ್ರ ದಾಖಲಾಗಬೇಕಿದೆ. ಪೋಲಿಸರ ಬಳಿ ದೂರು ಇಲ್ಲದಿದ್ದರೂ ಅವರು ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಮತ್ತು ತನಿಖೆಯನ್ನು ಮುಂದುವರಿಸಬೇಕು’ ಎಂದು ನ್ಯಾ.ವೆಂಕಟೇಶ ತಾಕೀತು ಮಾಡಿದರು.