ತಮಿಳುನಾಡಿಗೆ ಆರ್‌ಟಿಇ ನಿಧಿಯನ್ನು ತಡೆಹಿಡಿಯಬೇಡಿ: ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ
ಮದ್ರಾಸ್ ಹೈಕೋರ್ಟ್ | PTI
ಹೊಸದಿಲ್ಲಿ: ಶಿಕ್ಷಣ ಹಕ್ಕು ಕಾಯ್ದೆ ಮತ್ತು ಎನ್ಇಪಿ ನಡುವೆ ಸಂಬಂಧವನ್ನು ಕಲ್ಪಿಸಬೇಡಿ. ಎನ್ಇಪಿ ವಿವಾದದ ಕಾರಣಕ್ಕೆ ಆರ್‌ಟಿಇ (RTE) ನಿಧಿಯನ್ನು ತಡೆಹಿಡಿಯಬೇಡಿ ಎಂದು ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
ಸಮಗ್ರ ಶಿಕ್ಷಣ ಯೋಜನೆಯಡಿ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡುವಂತೆ ನೋಡಿಕೊಳ್ಳಬೇಕೆಂದು ಮದ್ರಾಸ್ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ತಮಿಳುನಾಡಿಗೆ ಪಾವತಿಸಬೇಕಾದ 2,152 ಕೋಟಿ ರೂ. ಶೈಕ್ಷಣಿಕ ನಿಧಿಯನ್ನು ತಡೆಹಿಡಿಯುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿದೆ.
NEPಗೆ ರಾಜ್ಯದ ನಿರಂತರ ವಿರೋಧದ ಹಿನ್ನೆಲೆ 2021ರಿಂದ ಕೇಂದ್ರ ಸರಕಾರ ಸಮಗ್ರ ಶಿಕ್ಷಾ ಯೋಜನೆಯಡಿ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಸರಕಾರ ಹೇಳಿಕೊಂಡಿದೆ. ನಿಯಮಗಳ ಪ್ರಕಾರ ಈ ಯೋಜನೆಗೆ ಕೇಂದ್ರವು 60% ಮತ್ತು ಉಳಿದ 40% ಅನ್ನು ರಾಜ್ಯವು ಭರಿಸಬೇಕಾಗುತ್ತದೆ.
ಈ ವರ್ಷ ಹಣ ಬಿಡುಗಡೆ ಮಾಡದ ಕಾರಣ RTE ಕಾಯ್ದೆಯಡಿಯಲ್ಲಿ ಖಾಸಗಿ ಶಾಲೆಗಳ ಪ್ರವೇಶ ಪ್ರಾರಂಭವಾಗಿಲ್ಲ ಎಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವಾಗ ಮದ್ರಾಸ್ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಜಿ.ಆರ್.ಸ್ವಾಮಿನಾಥನ್ ಮತ್ತು ವಿ.ಲಕ್ಷ್ಮಿ ಅವರಿದ್ದ ವಿಭಾಗೀಯ ಪೀಠ, 2023–2024ರ ಶೈಕ್ಷಣಿಕ ವರ್ಷದಲ್ಲಿ ಆರ್‌ಟಿಇ ಪಾವತಿಗಾಗಿ ತಮಿಳುನಾಡು 188ಕೋಟಿ ರೂ.ಗಳನ್ನು ಭರಿಸಿದೆ. ಆದರೆ ಕೇಂದ್ರ ಸರಕಾರ ಇನ್ನೂ ಮೊತ್ತವನ್ನು ಮರು ಪಾವತಿಸಿಲ್ಲ ಎಂದು ಗಮನಿಸಿದೆ.
ʼಸಮಗ್ರ ಶಿಕ್ಷಾಣ ಯೋಜನೆಯಡಿಯಲ್ಲಿ ಹಂಚಿಕೆಯಾದ 2,151 ಕೋಟಿ ರೂ.ಗಳಲ್ಲಿ 200 ಕೋಟಿ ರೂ.ಗಳನ್ನು ಆರ್‌ಟಿಇ ಮರುಪಾವತಿಗಾಗಿ ಮೀಸಲಿಡಲಾಗಿದೆ. ಆದರೆ, ತಮಿಳುನಾಡು ಎನ್ಇಪಿಯನ್ನು ಅಳವಡಿಸಿಕೊಳ್ಳದ ಕಾರಣ ಹಣವನ್ನು ತಡೆಹಿಡಿಯಲಾಗಿದೆʼ ಎಂದು ಕೇಂದ್ರವು ಈ ವೇಳೆ ಹೇಳಿದೆ.
ಈ ವಿಚಾರ ಈಗ ಸುಪ್ರೀಂ ಕೋರ್ಟ್ ಮುಂದಿರುವುದರಿಂದ ಯಾವುದೇ ನಿರ್ದೇಶನವನ್ನು ನೀಡಲಾಗುದಿಲ್ಲ, ಆದರೆ, ಆರ್‌ಟಿಇ ನಿಧಿಗಳು ಮತ್ತು ಎನ್ಇಪಿ ಅನುಷ್ಠಾನದ ನಡುವೆ ಸಂಬಂಧ ಕಲ್ಪಿಸುವುದರಲ್ಲಿ ಯಾವುದೇ ಸಮರ್ಥನೆ ಇಲ್ಲ ಎಂದು ನ್ಯಾಯಾಧೀಶರು ಗಮನಿಸಿದರು.