ಈಡಿ ಅಧಿಕಾರಿಗಳು ದಿನೇ ದಿನೇ ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳುವ ಮೂಲಕ ಪ್ರಬಲರಾಗುತ್ತಿದ್ದಾರೆ: ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್ | PC : PTI
ಚೆನ್ನೈ: ‘2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯು ತನ್ನ ಅಧಿಕಾರವ್ಯಾಪ್ತಿಯನ್ನು ಮೀರುತ್ತಿರುವ ಶಾಸನ ಎಂದು ನ್ಯಾಯಾಲಯಗಳು ಆಗಾಗ್ಗೆ ಟೀಕಿಸುತ್ತಿರುತ್ತವೆ ಮತ್ತು ಇದು ಆಗಾಗ್ಗೆ ಹೊಸ ಕಾನೂನು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಆದರೆ ವಾಸ್ತವದಲ್ಲಿ ಕಾಯ್ದೆಯನ್ನು ಜಾರಿಗೊಳಿಸುವಾಗ ತಮ್ಮ ಅಧಿಕಾರಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಪ್ರಬಲರಾಗುತ್ತಿರುವುದು ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳು ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ’ ಎಂದು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾ.ಎಂ.ಎಸ್.ರಮೇಶ ಅವರು ಕುಟುಕಿದ್ದಾರೆ.
ಚಿತ್ರ ನಿರ್ಮಾಪಕ ಆಕಾಶ ಭಾಸ್ಕರನ್ ಮತ್ತು ಅವರ ಸ್ನೇಹಿತ ವಿಕ್ರಮ ರವೀಂದ್ರನ್ ಸಲ್ಲಿಸಿರುವ ಮೂರು ರಿಟ್ ಅರ್ಜಿಗಳ ವಿಚಾರಣೆಯನ್ನು ನ್ಯಾ.ರಮೇಶ ಮತ್ತು ನ್ಯಾ.ವಿ.ಲಕ್ಷ್ಮೀನಾರಾಯಣ ರಾವ್ ಅವರ ವಿಭಾಗೀಯ ಪೀಠವು ಮಂಗಳವಾರ ಕೈಗೆತ್ತಿಕೊಂಡಿತ್ತು.
ಈಡಿ ಅಧಿಕಾರಿಗಳು ಶೋಧ ಮತ್ತು ಜಪ್ತಿ ಕಾರ್ಯಾಚರಣೆಗಾಗಿ ಬೀಗ ಹಾಕಲಾದ ವಸತಿ/ಉದ್ಯಮ ಕಚೇರಿಗೆ ತೆರಳಿದಾಗ ಅದನ್ನು ಸೀಲ್ ಮಾಡಲು ಪಿಎಂಎಲ್‌ಎ ಕಾಯ್ದೆಯ ಯಾವ ನಿಬಂಧನೆಯು ಅವರಿಗೆ ಅಧಿಕಾರ ನೀಡುತ್ತದೆ ಎಂದು ನ್ಯಾ.ರಮೇಶ ಅಚ್ಚರಿಯನ್ನು ವ್ಯಕ್ತಪಡಿಸಿದರು.
ಆಕಾಶ ಭಾಸ್ಕರನ್ ಕ್ರಿಯೇಟಿವ್ ಸ್ಟುಡಿಯೋಸ್ ಪ್ರೈ.ಲಿ.ನ ನಿರ್ದೇಶಕರಾಗಿರುವ ರವೀಂದ್ರನ್ ಅವರು ಮೇ 16ರಂದು ಶೋಧ ಕಾರ್ಯಾಚರಣೆಗಾಗಿ ಸೆಮ್ಮಿಂಚೇರಿಯ ತನ್ನ ಕಚೇರಿ ಆವರಣ ಮತ್ತು ಪೋಯೆಸ್ ಗಾರ್ಡನ್‌ನಲ್ಲಿರುವ ತನ್ನ ವಸತಿ ಫ್ಲ್ಯಾಟ್‌ಗೆ ತೆರಳಿದ್ದ ಈಡಿ ಅಧಿಕಾರಿಗಳು ಅವುಗಳಿಗೆ ಬೀಗ ಹಾಕಿದ್ದರಿಂದ ಮತ್ತು ತನ್ನ ಅನುಪಸ್ಥಿತಿಯಿಂದಾಗಿ ಅವುಗಳನ್ನು ಸೀಲ್ ಮಾಡಿದ್ದಾರೆ ಎಂದು ತನ್ನ ಎರಡು ರಿಟ್ ಅರ್ಜಿಗಳಲ್ಲಿ ಆರೋಪಿಸಿದ್ದಾರೆ.
ಎರಡು ಆವರಣಗಳನ್ನು ಸೀಲ್ ಮಾಡಿದ ಆರೋಪವನ್ನು ನಿರಾಕರಿಸಿದ ಈ.ಡಿ.ಯ ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಎನ್.ರಮೇಶ ಅವರು, ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಸಹಕರಿಸಲು ತಮ್ಮನ್ನು ಸಂಪರ್ಕಿಸುವಂತೆ ಅರ್ಜಿದಾರರನ್ನು ಕೋರುವ ನೋಟಿಸ್‌ಗಳನ್ನು ಮಾತ್ರ ಬಾಗಿಲಿಗೆ ಅಂಟಿಸಿದ್ದರು ಎಂದು ಪೀಠಕ್ಕೆ ತಿಳಿಸಿದರು. ಆದರೆ ಈಡಿ ಅಧಿಕಾರಿಗಳ ಅನುಮತಿಯಿಲ್ಲದೆ ಆವರಣವನ್ನು ತೆರೆಯುವಂತಿಲ್ಲ ಎಂದು ನೋಟಿಸ್‌ಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ನ್ಯಾ.ರಮೇಶ ಬೆಟ್ಟು ಮಾಡಿದರು.
ನೋಟಿಸ್‌ನಲ್ಲಿ ಪದಗಳು ಆವರಣವನ್ನು ಸೀಲ್ ಮಾಡಿದ್ದಕ್ಕೆ ಸಮನಾಗುವುದಿಲ್ಲ ಎಂದು ಭಾವಿಸಿದರೂ ವ್ಯಕ್ತಿಯೋರ್ವ ತನ್ನ ಮನೆ ಅಥವಾ ಕಚೇರಿಯನ್ನು ಪ್ರವೇಶಿಸುವುದನ್ನು ತಡೆಯುವ ಅಧಿಕಾರ ನಿಮಗೆ ಯಾರು ನೀಡಿದ್ದಾರೆ ಎಂದು ಪ್ರಶ್ನಿಸಿದ ನ್ಯಾ.ಲಕ್ಷ್ಮೀನಾರಾಯಣ ಅವರು,ಸರಕಾರಿ ಅಧಿಕಾರಿಯೋರ್ವರು ತನ್ನ ಬಾಗಿಲಿಗೆ ಅಂಟಿಸಿದ ನೋಟಿಸನ್ನು ಕಡೆಗಣಿಸಲು ಮತ್ತು ಅಧಿಕಾರಿಯ ಆದೇಶವನ್ನು ಧಿಕ್ಕರಿಸಿದ್ದಕ್ಕಾಗಿ ಕಾನೂನು ಕ್ರಮವನ್ನು ಎದುರಿಸುವ ಭಯವಿಲ್ಲದೆ ಆವರಣವನ್ನು ಪ್ರವೇಶಿಸಲು ಯಾವುದೇ ಪ್ರಜ್ಞಾವಂತ ವ್ಯಕ್ತಿಯು ಧೈರ್ಯ ಮಾಡುವುದಿಲ್ಲ ಎಂದು ಹೇಳಿದರು.
‘ಪಿಎಂಎಲ್‌ಎ ಕಾಯ್ದಯ ಕಲಂ 17 ಶೋಧ ಕಾರ್ಯಾಚರಣೆ ನಡೆಸಲು ಬೀಗವನ್ನು ಒಡೆಯಲೂ ಈ.ಡಿ.ಅಧಿಕಾರಿಗಳಿಗೆ ಅಧಿಕಾರವನ್ನು ನೀಡಿದೆ. ಆದರೆ ಈ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ನಾವು ಬಯಸಿರಲಿಲ್ಲ,ಹೀಗಾಗಿ ನೋಟಿಸ್‌ಗಳನ್ನು ಅಂಟಿಸಿದ್ದೇವೆ ’ಎಂದು ಹೇಳಿದ ಎಸ್‌ಪಿಪಿ,ನ್ಯಾಯಾಲಯವು ಅನುಮತಿಸಿದರೆ ಈ ನೋಟಿಸ್‌ಗಳನ್ನು ತಕ್ಷಣವೇ ತೆಗೆಯಲು ಈಡಿ ಅಧಿಕಾರಿಗಳು ಸಿದ್ಧರಿದ್ದಾರೆ. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ತಿಳಿಸಿದರು.