×
Ad

"ಅವಳು ನನ್ನ ಮಗಳಾಗಿದ್ದರೆ?": ಆನ್‌ಲೈನ್‌ನಲ್ಲಿಯ ಮಹಿಳಾ ನ್ಯಾಯವಾದಿಯ ಚಿತ್ರಗಳನ್ನು ತೆಗೆಯಲು ನ್ಯಾಯಾಧೀಶರ ಆದೇಶ

Update: 2025-07-10 17:10 IST

ಮದ್ರಾಸ್ ಹೈಕೋರ್ಟ್ | PC : PTI 

ಚೆನ್ನೈ: ನ್ಯಾಯಾಲಯದಲ್ಲಿ ಭಾವನಾತ್ಮಕ ಸನ್ನಿವೇಶದ ನಡುವೆ ಮದ್ರಾಸ್ ಉಚ್ಚ ನ್ಯಾಯಾಲಯವು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಮಹಿಳಾ ನ್ಯಾಯವಾದಿಯೋರ್ವರ ಖಾಸಗಿ, ಒಪ್ಪಿಗೆಯಲ್ಲದ ಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಹಾಕಲು ತಕ್ಷಣ ಕ್ರಮಗಳನ್ನು ಕೈಗೊಳ್ಳುವಂತೆ ಬುಧವಾರ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆದೇಶಿಸಿದೆ.

ಮಾಜಿ ಸಂಗಾತಿಯೋರ್ವ ಮಹಿಳಾ ನ್ಯಾಯವಾದಿಗೆ ಅರಿವಿಲ್ಲದಂತೆ ರೆಕಾರ್ಡ್ ಮಾಡಿದ್ದ ಎನ್ನಲಾದ ಈ ವಿಷಯವನ್ನು ಅಶ್ಲೀಲ ವೆಬ್‌ಸೈಟ್‌ಗಳು,ಮೆಸೇಜಿಂಗ್ ಆ್ಯಪ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು.

48 ಗಂಟೆಗಳಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಪತ್ತೆ ಹಚ್ಚುವಂತೆ, ನಿರ್ಬಂಧಿಸುವಂತೆ ಮತ್ತು ತೆಗೆದುಹಾಕುವಂತೆ ಸಚಿವಾಲಯಕ್ಕೆ ನಿರ್ದೇಶನ ನೀಡಿದ ನ್ಯಾ.ಎನ್.ಆನಂದ ವೆಂಕಟೇಶ ಅವರು, ಜು.14ರೊಳಗೆ ಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.

ಚಿತ್ರಗಳು ಮತ್ತು ವೀಡಿಯೊಗಳನ್ನು ವೈರಲ್ ಮಾಡಲಾಗಿದೆ ಮತ್ತು ಪದೇಪದೇ ಅಪ್‌ಲೋಡ್ ಮಾಡಲಾಗಿದೆ ಎನ್ನುವುದನ್ನು ಗಮನಿಸಿದ ನ್ಯಾಯಾಧೀಶರು,ಮಹಿಳೆ ತೀವ್ರ ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದಾಳೆ ಎಂದು ಹೇಳಿದರು.

ರಾಜ್ಯದ ಪೋಲಿಸ್ ಮಹಾನಿರ್ದೇಶಕ(ಡಿಜಿಪಿ)ರನ್ನು ಸ್ವಯಂಪ್ರೇರಿತವಾಗಿ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಸೇರಿಸಿದ ನ್ಯಾಯಾಲಯವು ಸಂಬಂಧಪಟ್ಟ ಎಲ್ಲರಿಗೆ ನಿರ್ದೇಶನಗಳನ್ನು ಹೊರಡಿಸುವಂತೆ ಸೂಚಿಸಿತು. ಈ ವಿಷಯವು ಮಹಿಳೆಯರನ್ನು ಇಂತಹ ಆಘಾತಗಳಿಂದ ರಕ್ಷಿಸಲು ವ್ಯವಸ್ಥಿತ ಸುಧಾರಣೆಯನ್ನು ಅಗತ್ಯವಾಗಿಸಿದೆ ಎಂದೂ ಅದು ಹೇಳಿತು.

‘ಈ ಮಹಿಳಾ ನ್ಯಾಯವಾದಿ ನನ್ನ ಮಗಳಾಗಿದ್ದರೆ ಏನಾಗುತ್ತಿತ್ತು ಎಂದು ನಾನು ಯೋಚಿಸುತ್ತಿದ್ದೆ’ ಎಂದು ಬಹಿರಂಗ ನ್ಯಾಯಾಲಯದಲ್ಲಿ ಗದ್ಗದಿತ ಸ್ವರದಲ್ಲಿ ಹೇಳಿದ ನ್ಯಾ.ವೆಂಕಟೇಶ,ಅರ್ಜಿದಾರರನ್ನು ತನ್ನ ಚೇಂಬರ್‌ನಲ್ಲಿ ಭೇಟಿಯಾಗಿ ಬೆಂಬಲದ ಮಾತುಗಳನ್ನಾಡಲು ತಾನು ಉದ್ದೇಶಿಸಿದ್ದೇನೆ ಎಂದು ಹೇಳಿದರು. ‘ಇದೇ ವೇಳೆ ಸ್ವಯಂ ಖಿನ್ನತೆಗೊಳಗಾಗದಂತೆ ನಾನು ಸಿದ್ಧಗೊಳ್ಳಬೇಕಿದೆ ’ಎಂದರು.

ಮಹಿಳಾ ನ್ಯಾಯವಾದಿಯ ಅಫಿಡವಿಟ್ ಪ್ರಕಾರ,ಅವರ ಕಾಲೇಜು ದಿನಗಳ ಸಂಗಾತಿ ತಮ್ಮ ಆತ್ಮೀಯ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದ. ವರ್ಷಗಳ ನಂತರ ಆನ್‌ಲೈನ್‌ನಲ್ಲಿ ಚಿತ್ರಗಳು ಮತ್ತು ವೀಡಿಯೊಗಳ ಪ್ರಸಾರ ಆರಂಭಗೊಂಡಿತ್ತು.

ಮಹಿಳಾ ನ್ಯಾಯವಾದಿ ಮಾಜಿ ಸಂಗಾತಿ ಮತ್ತು ವಾಟ್ಸ್‌ಆ್ಯಪ್ ಗ್ರುಪ್‌ವೊಂದರ ಅಡ್ಮಿನ್‌ನನ್ನು ಹೆಸರಿಸಿ ಎ.1ರಂದು ಪೋಲಿಸ್ ದೂರನ್ನು ಸಲ್ಲಿಸಿದ್ದರು. ಆದರೆ ಕಾನೂನು ಜಾರಿ ಸಂಸ್ಥೆ ಅಥವಾ ಸಚಿವಾಲಯದ ಸ್ವಷ್ಟ ಹಸ್ತಕ್ಷೇಪವಿಲ್ಲದೆ ಚಿತ್ರಗಳು ಮತ್ತು ವೀಡಿಯೊಗಳು ಹರಡುತ್ತಲೇ ಇದ್ದವು.

ಜೂ.18ರಂದು ಅವರು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ವಿಧ್ಯುಕ್ತ ಅಹವಾಲು ಸಲ್ಲಿಸಿ ಕಂಟೆಂಟ್‌ನ್ನು ತೆಗದುಹಾಕುವಂತೆ ಕೋರಿದ್ದರು. ಆದರೆ ಸಚಿವಾಲಯವು ತ್ವರಿತ ಕ್ರಮವನ್ನು ತೆಗೆದುಕೊಳ್ಳಲು ವಿಫಲಗೊಂಡಿದೆ ಎಂದು ಹಿರಿಯ ವಕೀಲ ಅಬುದು ಕುಮಾರ ರಾಜರತ್ನಂ ವಾದಿಸಿದರು.

‘ಅರ್ಜಿದಾರರ ಮನೋಬಲವು ಅವರ ಕಾನೂನು ತರಬೇತಿ ಮತ್ತು ಬೆಂಬಲ ವ್ಯವಸ್ಥೆಯಿಂದ ರೂಪುಗೊಂಡಿದೆ. ಅದೃಷ್ಟವಶಾತ್ ಅವರು ಈ ವೃತ್ತಿಯಲ್ಲಿದ್ದಾರೆ ಮತ್ತು ಅವರಿಗೆ ಇಲ್ಲಿರುವ ನಮ್ಮೆಲ್ಲರ ಸಹಾಯವಿದೆ ’ಎಂದು ಹೇಳಿದ ನ್ಯಾ.ವೆಂಕಟೇಶ,ಹೋರಾಡಲು ಧೈರ್ಯವಿಲ್ಲದೆ ಮೌನವಾಗಿ ಇಂತಹುದನ್ನೆಲ್ಲ ಸಹಿಸಿಕೊಳ್ಳುವ ಕೆಲವರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು. ಪ್ರತಿಯೊಬ್ಬ ವ್ಯಕ್ತಿಯ ಘನತೆಯ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯುವುದು ಸರಕಾರ ಮತ್ತು ನ್ಯಾಯಾಲಯಗಳ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News