ಮಧುರೈ: ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಮೃತ್ಯು
ಚೆನ್ನೈ: ಮಧುರೈನಲ್ಲಿ ರವಿವಾರ ನಡೆದ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ 20 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಮೃತರನ್ನು ಕಲ್ಲಕುರಿಚಿಯ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ರವಿವಾರ ನಡೆದ ಉತಿರಂ 2023 ರಕ್ತದಾನ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ. ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹಾಗೂ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಸಚಿವ ಪಿ. ಮೂರ್ತಿ ಅವರು ಮ್ಯಾರಥಾನ್ ಗೆ ಚಾಲನೆ ನೀಡಿದ್ದರು.
ಮುಂಜಾನೆಯೇ ಮ್ಯಾರಥಾನ್ ಯಶಸ್ವಿಯಾಗಿ ಮುಗಿಸಿದ ದಿನೇಶ್ ಸುಮಾರು ಒಂದು ಗಂಟೆ ಕಾಲ ಆರೋಗ್ಯವಂತರಾಗಿ ಕಾಣಿಸಿಕೊಂಡರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಆದಾಗ್ಯೂ, ಅವರು ನಂತರ ಅಸ್ವಸ್ಥತೆಯ ಬಗ್ಗೆ ದೂರು ನೀಡಿದರು ಹಾಗೂ ವಿಶ್ರಾಂತಿ ಕೋಣೆಗೆ ಹೋದರು. ನಂತರ ಅವರು ಮೂರ್ಛೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅರಿವಾಗಿ ತಕ್ಷಣ ಸಮೀಪದ ರಾಜಾಜಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಆಸ್ಪತ್ರೆಯ ಅಧಿಕಾರಿಗಳು ವಿದ್ಯಾರ್ಥಿಯನ್ನು ಬೆಳಿಗ್ಗೆ 8:45 ರ ಸುಮಾರಿಗೆ ತುರ್ತು ವಿಭಾಗಕ್ಕೆ ದಾಖಲಿಸಿದರು, ಅಲ್ಲಿ ಅವರಿಗೆ ಕೃತಕ ಉಸಿರಾಟ ಹಾಗೂ ಜೀವರಕ್ಷಕ ಚಿಕಿತ್ಸೆ ನೀಡಲಾಯಿತು.
ಆಸ್ಪತ್ರೆಗೆ ಕರೆತಂದ ಕೆಲವೇ ಗಂಟೆಗಳ ನಂತರ ಬೆಳಗ್ಗೆ 10:10ರ ಸುಮಾರಿಗೆ ಹೃದಯ ಸ್ತಂಭನಕ್ಕೆ ಒಳಗಾದರು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಅಧಿಕಾರಿಗಳು ವಿದ್ಯಾರ್ಥಿಯನ್ನು ಬದುಕಿಸಲು ಪ್ರಯತ್ನಿಸಿದರೂ, ಆತ ಬೆಳಿಗ್ಗೆ 10:45 ಕ್ಕೆ ನಿಧನವಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.