×
Ad

ಮಹಾ ಕುಂಭಮೇಳದ ಏಳು ಡೇರೆಗಳಲ್ಲಿ ಬೆಂಕಿ ಆಕಸ್ಮಿಕ

Update: 2025-02-15 22:10 IST

PC : PTI 

ಮಹಾಕುಂಭನಗರ: ಶನಿವಾರ ಸಂಜೆ ಮಹಾ ಕುಂಭಮೇಳ ಪ್ರದೇಶದ ಶಿಬಿರವೊಂದರ ದಾಸ್ತಾನು ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದ ಏಳು ಡೇರೆಗಳು ಸುಟ್ಟು ಭಸ್ಮವಾಗಿವೆ. ಇದರೊಂದಿಗೆ ಕಂಬಳಿಗಳು ಹಾಗೂ ಆಹಾರ ಧಾನ್ಯಗಳು ಸೇರಿದಂತೆ ಕೆಲವು ಸಾಮಗ್ರಿಗಳು ಹಾನಿಗೊಳಗಾಗಿವೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾ ಕುಂಭಮೇಳ ಪ್ರದೇಶದ 19ನೇ ಸೆಕ್ಟರ್ ನಲ್ಲಿರುವ ಶಿಬಿರವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಏಳು ಡೇರೆಗಳಿಗೆ ಬೆಂಕಿ ವ್ಯಾಪಿಸಿದೆ ಎಂದು ಮುಖ್ಯ ಅಗ್ನಿಶಾಮಕ ದಳ ಅಧಿಕಾರಿ (ಕುಂಭ್) ಪ್ರಮೋದ್ ಶರ್ಮ ತಿಳಿಸಿದ್ದಾರೆ.

ನಾವು ಅಗ್ನಿ ಅವಘಡದ ಕುರಿತು ಮಾಹಿತಿ ಸ್ವೀಕರಿಸುತ್ತಿದ್ದಂತೆಯೆ, ಎರಡು ನಿಮಿಷಗಳಲ್ಲಿ ಅಗ್ನಿಶಾಮಕ ದಳದ ಮೋಟಾರ್ ಬೈಕ್ ಗಳು ಘಟನಾ ಸ್ಥಳವನ್ನು ತಲುಪಿದವು. ಇದರ ಬೆನ್ನಿಗೇ, ನಾಲ್ಕು ಅಗ್ನಿಶಾಮಕ ವಾಹನಗಳು ಆಗಮಿಸಿದವು ಎಂದು ಅವರು ಹೇಳಿದ್ದಾರೆ.

ಲವ್ ಕುಶ್ ಸೇವಾ ಮಂಡಲ್ ಶಿಬಿರದಲ್ಲಿ ಸಂಜೆ ಸುಮಾರು 6.15ರ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಸುಮಾರು ಐದು ನಿಮಿಷಗಳೊಳಗಾಗಿ ಬೆಂಕಿಯನ್ನು ಹತೋಟಿಗೆ ತಂದರು ಎಂದು ಮಹಾ ಕುಂಭದ ಪೊಲೀಸ್ ಮಹಾ ನಿರೀಕ್ಷಕ ವೈಭವ್ ಕೃಷ್ಣ ತಿಳಿಸಿದ್ದಾರೆ.

“ಶಿಬಿರವು ಕಲ್ಪವಸಿಸ್ (ಕುಂಭಮೇಳದ ವೇಳೆ ಯಾತ್ರಾರ್ಥಿಗಳು ವಿಸ್ತರಿತ ಅವಧಿಗೆ ಉಳಿಯುವ ಸ್ಥಳ) ಅನ್ನೂ ಹೊಂದಿತ್ತು. ಕೊಠಡಿಯಲ್ಲಿ ಶೇಖರಿಸಿಡಲಾಗಿದ್ದ ಕಂಬಳಿಗಳು ಹಾಗೂ ಆಹಾರ ಧಾನ್ಯಗಳಂಥ ಸಾಮಗ್ರಿಗಳು ಬೆಂಕಿಯಿಂದ ಹಾನಿಗೊಳಗಾಗಿವೆ” ಎಂದು ಅವರು ಹೇಳಿದ್ದಾರೆ.

ಅಗ್ನಿ ಅವಘಡದ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News