ಮಹಾರಾಷ್ಟ್ರ: 14 ಸಾವಿರ ಪುರುಷರಿಗೂ ಲಡ್ಕಿ ಬಹಿನ್ ಸೌಲಭ್ಯ; ಸಿಬಿಐ ತನಿಖೆಗೆ ಆಗ್ರಹ
PC: PTI
ಪುಣೆ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಜಾರಿಗೆ ತಂದಿರುವ ಲಡ್ಕಿ ಬಹಿನ್ ಯೋಜನೆಯಡಿ 14 ಸಾವಿರ ಪುರುಷರು ಕೂಡಾ ಸೌಲಭ್ಯ ಪಡೆಯುತ್ತಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಎನ್ ಸಿಪಿ (ಎಸ್ಪಿ) ಕಾರ್ಯಧ್ಯಕ್ಷೆ ಸುಪ್ರಿಯಾ ಸುಳೇ ಆಗ್ರಹಿಸಿದ್ದಾರೆ. ಇಂಥ ಪ್ರಕರಣ ಪತ್ತೆಯಾದಲ್ಲಿ ಫಲಾನುಭವಿಗಳಿಂದ ಹಣವನ್ನು ವಾಪಾಸು ಪಡೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸರ್ಕಾರ 2024ರ ಆಗಸ್ಟ್ ನಲ್ಲಿ ಆರಂಭಿಸಿರುವ ಯೋಜನೆಯಲ್ಲಿ ಇದುವರೆಗೆ 21 ಕೋಟಿ ರೂಪಾಯಿ ವಿತರಿಸಲಾಗಿದೆ ಎಂಬ ವರದಿಯಲ್ಲಿ 14 ಸಾವಿರ ಪುರುಷರ ಹೆಸರು ಕೂಡಾ ಸೇರಿದೆ ಎಂಬ ವರದಿಗಳನ್ನು ಉಲ್ಲೇಖಿಸಿ ಸುಪ್ರಿಯಾ ಈ ಆರೋಪ ಮಾಡಿದ್ದಾರೆ.
ಪುಣೆಯಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಸುಳೇ, ಈ ಯೋಜನೆಯಲ್ಲಿ ಯಾರೆಲ್ಲ ಪುರುಷರು ಸೌಲಭ್ಯ ಪಡೆಯುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಸಿಬಿಐ ತನಿಖೆ ನಡೆಸಬೇಕು ಎಂದು ಅಗ್ರಹಿಸಿದರು. "ಕೆಲ ಸಣ್ಣ ಆರೋಪಗಳ ಬಗ್ಗೆ ಕೂಡಾ ಸರ್ಕಾರ ಸಿಬಿಐ ಹಾಗೂ ಕಾನೂನು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸುತ್ತದೆ. ಈ ಯೋಜನೆಯಲ್ಲಿ ಪುರುಷರನ್ನು ಸೇರಿಸಿದ ಗುತ್ತಿಗೆದಾರರನ್ನು ಪತ್ತೆ ಮಾಡಲು ಸಿಬಿಐ ತನಿಖೆ ನಡೆಸುವುದಾಗಿ ಸಕಾರ ಈಗ ಘೋಷಿಸಬೇಕು" ಎಂದು ಹೇಳಿದರು.
ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಹಣಕಾಸು ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಅಜಿತ್ ಪವಾರ್, "ಫಲಾನುಭವಿಗಳ ಪಟ್ಟಿಯಲ್ಲಿ ಪುರುಷರ ಹೆಸರು ಸೇರ್ಪಡೆಯಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಪುರುಷರ ಹೆಸರು ಪತ್ತೆಯಾದಲ್ಲಿ, ಅವರು ಈಗಾಗಲೇ ಪಡೆದಿರುವ ಮೊತ್ತವನ್ನು ವಾಪಾಸು ಪಡೆಯಲಾಗುವುದು. ಅವರು ಸಹಕರಿಸದಿದ್ದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.
ಲಡ್ಕಿ ಬಹಿನ್ ಯೋಜನೆಯು ದುರ್ಬಲ ವರ್ಗದ ಮಹಿಳೆಯರಿಗೆ ಮಾತ್ರ ಇದೆ. ಯೋಜನೆಯ ಫಲಾನುಭವಿಗಳನ್ನು ಪರಿಶೀಲಿಸುವ ವೇಳೆ, ಉದ್ಯೋಗದಲ್ಲಿ ಇರುವ ಕೆಲ ಮಹಿಳೆಯರೂ ಯೋಜನೆಯ ಸೌಲಭ್ಯ ಪಡೆಯುತ್ತಿರುವುದು ಪತ್ತೆಯಾಗಿತ್ತು.