ಕರ್ನಾಟಕದೊಂದಿಗೆ ಗಡಿ ವಿವಾದ ಪರಿಹಾರಕ್ಕಾಗಿ ಸಮಿತಿಯನ್ನು ಪುನರ್ರಚಿಸಿದ ಮಹಾರಾಷ್ಟ್ರ
ದೇವೇಂದ್ರ ಫಡ್ನವೀಸ್ | PTI
ಮುಂಬೈ: ಕರ್ನಾಟಕದೊಂದಿಗಿನ ದೀರ್ಘಕಾಲೀನ ಗಡಿ ವಿವಾದವನ್ನು ಬಗೆಹರಿಸುವ ಹೊಣೆಯನ್ನು ಒಪ್ಪಿಸಲಾಗಿರುವ ತನ್ನ ಉನ್ನತಾಧಿಕಾರ ಸಮಿತಿಯನ್ನು ಮಹಾರಾಷ್ಟ್ರ ಸರಕಾರವು ಪುನರ್ರಚಿಸಿದೆ.
ಸರಕಾರವು ಗುರುವಾರ ಸಮಿತಿ ಪುನರ್ರಚನೆಯನ್ನು ದೃಢಪಡಿಸಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈಗ ಸಮಿತಿಯ ನೇತೃತ್ವವನ್ನು ವಹಿಸಲಿದ್ದಾರೆ.
ಕಾಲಕಾಲಕ್ಕೆ ಸರಕಾರಗಳು ಬದಲಾದಂತೆಲ್ಲ ಸಮಿತಿಯು ಹಲವಾರು ಸಲ ಪುನರ್ರಚನೆಗೊಂಡಿದೆ. ಮಹಾಯುತಿ ಮೈತ್ರಿಕೂಟವು ಆಗಿನ ಮುಖ್ಯಮಂತ್ರಿ ಏಕನಾಥ ಶಿಂದೆಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ 2022, ನ.22ರಂದು ಸಮಿತಿಯನ್ನು ಪುನರ್ರಚಿಸಲಾಗಿತ್ತು. ಕಳೆದ ವಿಧಾನಸಭೆಯಲ್ಲಿ ಫಡ್ನವೀಸ್ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಮಿತಿಯನ್ನು ಈಗ ಮತ್ತೆ ಪುನರ್ರಚಿಸಲಾಗಿದೆ.
ನೂತನವಾಗಿ ಪುನರ್ರಚಿತ ಸಮಿತಿಯು 18 ಸದಸ್ಯರನ್ನು ಒಳಗೊಂಡಿದೆ. ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಮತ್ತು ಅಜಿತ ಪವಾರ್, ಮಾಜಿ ಮುಖ್ಯಮಂತ್ರಿಗಳಾದ ನಾರಾಯಣ ರಾಣೆ, ಶರದ್ ಪವಾರ್ ಮತ್ತು ಪೃಥ್ವಿರಾಜ್ ಚವಾಣ್ ಅವರೂ ಸಮಿತಿಯ ಸದಸ್ಯರಲ್ಲಿ ಸೇರಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರಸ್ತುತ ಪ್ರತಿಪಕ್ಷ ನಾಯಕರಿಲ್ಲ,ಶಿವಸೇನೆ(ಯುಬಿಟಿ) ಮತ್ತು ಕಾಂಗ್ರೆಸ್ ಶಾಸಕರು ಉನ್ನತಾಧಿಕಾರ ಸಮಿತಿಯಲ್ಲಿ ಸ್ಥಾನವನ್ನು ಪಡೆದಿಲ್ಲ.