ಮಹಾರಾಷ್ಟ್ರ: ಶಕ್ತೀಪೀಠ ಎಕ್ಸ್ಪ್ರೆಸ್ ವೇ ಯೋಜನೆ; ಭೂಮಿ ಸಮೀಕ್ಷೆ ವಿರೋಧಿಸಿ ರೈತರ ಪ್ರತಿಭಟನೆ
PC : PTI
ಮುಂಬೈ: ಪ್ರಸ್ತಾವಿತ ನಾಗಪುರ-ಗೋವಾ ಶಕ್ತಿಪೀಠ ಎಕ್ಸ್ಪ್ರೆಸ್ ವೇ ಯೋಜನೆಗೆ ಭೂ ಸಮೀಕ್ಷೆಯನ್ನು ವಿರೋಧಿಸಿ ಮಹಾರಾಷ್ಟ್ರದ ಮರಾಠಾವಾಡದ ವಿವಿಧ ಜಿಲ್ಲೆಗಳ ರೈತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಹಾಗೂ ಪಶ್ಚಿಮ ಮಹಾರಾಷ್ಟ್ರವನ್ನು ಗೋವಾಕ್ಕೆ ಸಂಪರ್ಕಿಸಲಿರುವ 802 ಕಿ.ಮೀ. ಉದ್ದದ ಪ್ರವೇಶ ನಿಯಂತ್ರಿತ, 6 ಪಥಗಳ ಕಾರಿಡಾರ್ಗಾಗಿ ತಮ್ಮ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕುರಿತಂತೆ ಪ್ರತಿಭಟನೆ ನಡೆಸುತ್ತಿರುವ ರೈತರು ಕಳವಳ ವ್ಯಕ್ತಪಡಿಸಿದ್ದಾರೆ.
ಯೋಜನೆಗಾಗಿ ಭೂಸ್ವಾಧೀನಕ್ಕೆ ಮಹಾರಾಷ್ಟ್ರ ಸಂಪುಟ ಜೂನ್ 24ರಂದು ಅನುಮೋದನೆ ನೀಡಿದ ಬಳಿಕ ಪ್ರತಿಭಟನೆಗಳು ಮತ್ತೆ ಆರಂಭವಾಗಿವೆ.
ಈ ಎಕ್ಸ್ಪ್ರೆಸ್ವೇ ಮರಾಠಾವಾಡ ವಲಯದ ನಾಂದೇಡ್, ಹಿಂಗೋಲಿ, ಪರ್ಭನಿ, ಬೀಡ್, ಲಾತುರ್ ಹಾಗೂ ಧಾರಾಶಿವ್ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರು ನಾಂದೇಡ್ ಜಿಲ್ಲೆಯ ಅರ್ಧಾಪುರ ತಾಲೂಕಿನ ಮಾಲೇಗಾಂವ್ ರಸ್ತೆಯಲ್ಲಿ ದರಣಿ ನಡೆಸಿದರು ಹಾಗೂ ತಮ್ಮ ಭೂಮಿಯನ್ನು ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
‘‘ಶಂಕರಪೀಠ ಯೋಜನೆಗೆ ಸಮೀಕ್ಷೆ ನಡೆಸುವಾಗ ಸರಕಾರ ಕೃಷಿಕರನ್ನು ನಿರ್ಲಕ್ಷಿಸಿದೆ. ನಾವು ಸಮೀಕ್ಷೆಯನ್ನು ವಿರೋಧಿಸುತ್ತೇವೆ’’ ಎಂದು ನಾಂದೇಡ್ ಸಂಸದ ರವಿಂದ್ರ ಚವಾಣ್ ತಿಳಿಸಿದ್ದಾರೆ.
ರೈತರು ಹಿಂಗೋಲಿ ಜಿಲ್ಲೆಯ ನಾಂದೇಡ್-ವಾಶಿಮ್ ರಸ್ತೆಯಲ್ಲಿ ಧರಣಿ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದರು. ‘‘ಈ ಯೋಜನೆ ನನ್ನ ಹಣ್ಣಿನ ತೋಟವನ್ನು ಸ್ವಾಧೀನಪಡಿಸಿಕೊಂಡು, ನನ್ನನ್ನು ಭೂರಹಿತನನ್ನಾಗಿ ಮಾಡುತ್ತದೆ. ಆದುದರಿಂದ ನಾನು ಈ ಯೋಜನೆಯನ್ನು ವಿರೋಧಿಸುತ್ತೇನೆ’’ ಎಂದು ರೈತರೋರ್ವರು ಹೇಳಿದ್ದಾರೆ.
‘‘ನನ್ನ ಬಳಿ ಎರಡು ಎಕರೆ ಭೂಮಿ ಇದ್ದು, ಅದನ್ನು ಎಕ್ಸ್ಪ್ರೆಸ್ ವೇ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಪರಿಹಾರದಿಂದ ಯಾವ ಲಾಭವಿದೆ ? ಅದು ದೀರ್ಘ ಕಾಲ ಉಳಿಯುವುದಿಲ್ಲ. ರೈತನಾಗಿ, ನಾನು ಭೂಮಿಯನ್ನು ಅವಲಂಬಿಸಿದ್ದೇನೆ’’ ಎಂದು ಇನ್ನೋರ್ವ ರೈತ ಹೇಳಿದ್ದಾರೆ.
ಇದೇ ರೀತಿಯ ಪ್ರತಿಭಟನೆ ಬೀಡ್ ಹಾಗೂ ಧಾರಾಶಿವ್ ಜಿಲ್ಲೆಗಳಲ್ಲಿ ನಡೆಯಿತು.