×
Ad

ಮಹಾರಾಷ್ಟ್ರ: ಎತ್ತು, ಟ್ರ್ಯಾಕ್ಟರ್‌ಗೆ ಹಣವಿಲ್ಲದೆ ಕೃಷಿಗಾಗಿ ಜಮೀನನ್ನು ಸ್ವತಃ ಉಳುಮೆ ಮಾಡಿದ ವೃದ್ಧ ದಂಪತಿ!

Update: 2025-07-02 21:02 IST

PC ;  X \ @INCMumbai

ಮುಂಬೈ: ಮಹಾರಾಷ್ಟ್ರದ ಲಾತೂರಿನಲ್ಲಿ 75ರ ಹರೆಯದ ವೃದ್ಧರೋರ್ವರು ತನ್ನ ವಯಸ್ಸಾದ ಪತ್ನಿಯೊಂದಿಗೆ ಸೇರಿಕೊಂಡು ಜಮೀನನ್ನು ಉಳುಮೆ ಮಾಡುತ್ತಿರುವ ಹೃದಯವಿದ್ರಾವಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ರೈತರು ಬೆಳೆಗಳನ್ನು ಬೆಳೆಯಲು ಹೇಗೆ ಕಷ್ಟ ಪಡುತ್ತಿದ್ದಾರೆ ಎನ್ನುವುದರ ಮೇಲೆ ಬೆಳಕು ಚೆಲ್ಲಿದೆ.

ಮರಾಠವಾಡಾ ಪ್ರದೇಶದ ಲಾತೂರು ಜಿಲ್ಲೆಯ ಹಾಡೋಳ್ತಿ ಗ್ರಾಮದ ನಿವಾಸಿ ಅಂಬಾದಾಸ ಪವಾರ್ ಅವರು 2.5 ಎಕರೆ ಜಮೀನು ಹೊಂದಿದ್ದಾರೆ. ಜಮೀನನ್ನು ಉತ್ತು ಅದನ್ನು ಕೃಷಿಗೆ ಹದ ಮಾಡಲು ಎತ್ತುಗಳು ಅಥವಾ ಟ್ರ್ಯಾಕ್ಟರ್ ಪಡೆಯಲು ಅಗತ್ಯ ಸಂಪನ್ಮೂಲಗಳು ಅವರ ಬಳಿಯಿಲ್ಲ. ಉಳುಮೆಗಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಲೂ ಅವರು ಶಕ್ತರಲ್ಲ.

ಬೇರೆ ಆಯ್ಕೆಯಿಲ್ಲದೆ ಅಂಬಾದಾಸ ಮತ್ತು ಅವರ ಪತ್ನಿ ಮುಕ್ತಾಬಾಯಿ ಹಲವಾರು ವರ್ಷಗಳಿಂದಲೂ ನೇಗಿಲನ್ನು ಬಳಸಿ ಜಮೀನನ್ನು ಉಳುಮೆ ಮಾಡುತ್ತಿದ್ದಾರೆ. ಅವರ ಮಗ ನಗರದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಇಲ್ಲಿ ಉಳುಮೆಯಿಂದ ಹಿಡಿದು ಬೆಳೆ ಕೊಯ್ಲಿನವರೆಗೆ ಎಲ್ಲ ಕೃಷಿಕಾರ್ಯಗಳನ್ನು ವೃದ್ಧ ದಂಪತಿಯೇ ಸ್ವತಃ ಮಾಡುತ್ತಿದ್ದಾರೆ. ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು ಅವರೊಂದಿಗೇ ವಾಸವಾಗಿದ್ದಾರೆ. ಮಗಳನ್ನು ಮದುವೆ ಮಾಡಿಕೊಟ್ಟಿದ್ದು, ಆಕೆ ಗಂಡನ ಮನೆಯಲ್ಲಿದ್ದಾಳೆ.

ಕಳೆದ ಎರಡು ವರ್ಷಗಳಿಂದ ಭಾರೀ ಮಳೆಯಿಂದಾಗಿ ಕಷ್ಟ ಪಟ್ಟು ಬೆಳದಿದ್ದ ಬೆಳೆ ಹಾನಿಗೀಡಾಗಿದ್ದು ತಾನು ಸಾಲ ಪಡೆದುಕೊಳ್ಳುವಂತೆ ಮಾಡಿದೆ ಎಂದು ಅಂಬಾದಾಸ ವಿಷಾದಿಸಿದರು.

ವೈರಲ್ ಆಗಿರುವ ವೀಡಿಯೊದಲ್ಲಿ ಭೂಮಿಯನ್ನು ಹದ ಮಾಡುತ್ತಿರುವಾಗ ವೃದ್ಧ ದಂಪತಿ ದಣಿದಂತೆ ಕಂಡು ಬರುತ್ತಿದ್ದಾರೆ.‘ ‘ನಾನು ಇದನ್ನು ನಿಲ್ಲಿಸುವಂತಿಲ್ಲ. ನನ್ನ ತೋಳುಗಳು ನಡುಗುತ್ತವೆ. ಭಾರದಿಂದಾಗಿ ನನ್ನ ಕಾಲುಗಳು ಬಾಗುತ್ತವೆ ಮತ್ತು ಕೆಲವೊಮ್ಮೆ ಕುತ್ತಿಗೆ ನೋಯುತ್ತಿರುತ್ತದೆ. ಆದರೆ ಜೀವನವು ನಮಗೆ ಬೇರೆ ಆಯ್ಕೆಯನ್ನು ನೀಡಿಲ್ಲ’ ಎಂದು ಅಂಬಾದಾಸ ಹೇಳಿದರು.

ಹೆಚ್ಚುತ್ತಿರುವ ಕೃಷಿ ವೆಚ್ಚಗಳು ಮತ್ತು ನಂಬಲು ಸಾಧ್ಯವಿಲ್ಲದ ಹವಾಮಾನವು ಜೀವನೋಪಾಯಕ್ಕೆ ಅಪಾಯಗಳನ್ನು ಹೆಚ್ಚಿಸುತ್ತಿರುವುದರಿಂದ ತುತ್ತು ಕೂಳಿಗಾಗಿ ಸಣ್ಣ ರೈತರ ಹೋರಾಟದ ಮೇಲೆ ಈ ವಿಡಿಯೊ ಮತ್ತೊಮ್ಮೆ ಬೆಳಕು ಚೆಲ್ಲಿದೆ. ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ಕೇವಲ ಮೂರು ತಿಂಗಳುಗಳಲ್ಲಿ ಮರಾಠವಾಡಾ ಪ್ರದೇಶದಲ್ಲಿ 269 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ 204 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು,ಈ ವರ್ಷ ಶೇ.30ರಷ್ಟು ಏರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News