ಮಹಾರಾಷ್ಟ್ರ: ಭಕ್ತರನ್ನು ಥಳಿಸುತ್ತಿದ್ದ, ತನ್ನ ಮೂತ್ರವನ್ನು ಕುಡಿಸುತ್ತಿದ್ದ ಢೋಂಗಿ ‘ಬಾಬಾ’ ವಿರುದ್ಧ ಪ್ರಕರಣ
ಮುಂಬೈ,ಜು.20: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಆಧ್ಯಾತ್ಮಿಕ ಚಿಕಿತ್ಸೆಯ ಸೋಗಿನಲ್ಲಿ ಗ್ರಾಮಸ್ಥರನ್ನು ಭೀಭತ್ಸ ಮತ್ತು ಹೀನಾಯ ವಿಧಿಗಳಿಗೆ ಒಳಪಡಿಸುತ್ತಿದ್ದ ಸ್ವಘೋಷಿತ ‘ಬಾಬಾ’ನ ಕರ್ಮಕಾಂಡವು ಬಯಲಾಗಿದ್ದು, ಪೋಲಿಸರು ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ವೈಜಾಪುರ ತಾಲೂಕಿನ ಶಿರೂರ ಗ್ರಾಮದಲ್ಲಿಯ ದೇವಸ್ಥಾನದಿಂದ ತನ್ನ ಕಾರಸ್ತಾನ ನಡೆಸುತ್ತಿದ್ದ ‘ಬಾಬಾ’ ಸಂಜಯ ಪಗಾರೆ ಕಳೆದ ಎರಡು ವರ್ಷಗಳಿಂದಲೂ ಕುರುಡು ನಂಬಿಕೆಯ ಹಿಂಸಾತ್ಮಕ ಆತಂಕಕಾರಿ ಕಾರ್ಯದಲ್ಲಿ ತೊಡಗಿದ್ದ. ತಾನು ಅಲೌಕಿಕ ಶಕ್ತಿಗಳನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ ಪಗಾರೆ, ತನ್ನ ‘ಅಘೋರಿ ವಿಧಿಗಳ’ ಮೂಲಕ ತಾನು ದೆವ್ವಗಳನ್ನು ಉಚ್ಚಾಟಿಸಬಲ್ಲೆ, ಅವಿವಾಹಿತರಿಗೆ ಮದುವೆಯಾಗುವಂತೆ ಮಾಡಬಲ್ಲೆ ಮತ್ತು ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುವಂತೆ ಮಾಡುತ್ತೇನೆ ಎಂದು ಅಮಾಯಕ ಜನರನ್ನು ನಂಬಿಸುತ್ತಿದ್ದ. ಆದರೆ ವಾಸ್ತವದಲ್ಲಿ ಆತನ ಆಚರಣೆಗಳು ಕ್ರೂರ ಮತ್ತು ಅವಮಾನಕಾರಿಯಾಗಿರುತ್ತಿದ್ದವು.
ಪುರುಷರು ಮತ್ತು ಮಹಿಳೆಯರೆನ್ನದೆ ತನ್ನ ನೆರವು ಕೋರಿ ಬರುವವರನ್ನು ಬಡಿಗೆಯಿಂದ ಥಳಿಸುತ್ತಿದ್ದ ಈ ಢೋಂಗಿ ಬಾಬಾ ಅವರು ತಮ್ಮದೇ ಚಪ್ಪಲಿಗಳನ್ನು ಬಾಯಲ್ಲಿಟ್ಟುಕೊಳ್ಳುವಂತೆ ಮತ್ತು ದೇವಸ್ಥಾನದ ಸುತ್ತ ಓಡುವಂತೆ ಬಲವಂತಗೊಳಿಸುತ್ತಿದ್ದ. ಹಲವಾರು ಪ್ರಕರಣಗಳಲ್ಲಿ ‘ಚಿಕಿತ್ಸೆ’ ಎಂದು ಮರಗಳ ಎಲೆಗಳನ್ನು ತಿನ್ನಿಸಿದ್ದೂ ಇದೆ.
ತನ್ನ ಅನುಯಾಯಿಗಳಿಗೆ ಬಲವಂತದಿಂದ ತನ್ನ ಮೂತ್ರವನ್ನೂ ಆತ ಕುಡಿಸುತ್ತಿದ್ದ. ಮೂಡನಂಬಿಕೆ ವಿರೋಧಿ ಸಂಘಟನೆಯೊಂದರ ಕಾರ್ಯಕರ್ತರು ರಹಸ್ಯ ಕ್ಯಾಮೆರಾಗಳನ್ನು ಬಳಸಿ ಕುಟುಕು ಕಾರ್ಯಾಚರಣೆ ನಡೆಸಿದ ಬಳಿಕ ಈ ಢೋಂಗಿಯ ಕರ್ಮಕಾಂಡ ಬಯಲಾಗಿದೆ. ಅಧಿಕಾರಿಗಳ ವಶದಲ್ಲಿರುವ ಕುಟುಕು ಕಾರ್ಯಾಚರಣೆಯ ವೀಡಿಯೊ ಫೂಟೇಜ್ ಗಳು ಆತಂಕಕಾರಿ ದೃಶ್ಯಗಳನ್ನು ಒಳಗೊಂಡಿವೆ.