ಮಹಾರಾಷ್ಟ್ರ: ಯುವತಿಯ ಅಪಹರಿಸಿ, ಅತ್ಯಾಚಾರ; ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಮುಂಬೈ, ಜು. 27: ಇಪ್ಪತ್ಮೂರು ವರ್ಷದ ಯುವತಿಯ ಅಪಹರಿಸಿ, ಕಾರಿನಲ್ಲಿ ಅತ್ಯಾಚಾರಗೈದು ಅನಂತರ ರಸ್ತೆ ಬದಿಯಲ್ಲಿ ಎಸೆದು ಹೋದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲಾ ಹಿಲ್ ಟೌನ್‌ನಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಮುಂಬೈಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ಲೋನಾವಾಲಾದ ಮಾವಲ್ ಪ್ರದೇಶದ ತುಂಗಾರ್ಲಿ ಯಲ್ಲಿ ಶುಕ್ರವಾರ ತಡ ರಾತ್ರಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾನು ತುಂಗಾರ್ಲಿಯ ನಿವಾಸಿ. ಶುಕ್ರವಾರ ರಾತ್ರಿ ನಡೆದುಕೊಂಡು ಹೋಗುತ್ತಿರುವಾಗ ಕಾರೊಂದು ತನ್ನ ಸಮೀಪ ನಿಂತಿತು ಹಾಗೂ ಅದರಲ್ಲಿದ್ದ ವ್ಯಕ್ತಿಯೋರ್ವ ತನ್ನನ್ನು ಬಲವಂತವಾಗಿ ಕಾರಿನೊಳಗೆ ಹತ್ತಿಸಿದ. ಅನಂತರ ತುಂಗಾರ್ಲಿಯ ನಿರ್ಜನ ಸ್ಥಳಗಳಿಗೆ ಕೊಂಡೊಯ್ದು ಚಲಿಸುತ್ತಿರುವ ಕಾರಿನಲ್ಲಿ ಮತ್ತೆ ಮತ್ತೆ ಅತ್ಯಾಚಾರ ಎಸಗಿದ. ಅನಂತರ ಶನಿವಾರ ಮುಂಜಾನೆ ರಸ್ತೆ ಬದಿಯಲ್ಲಿ ತನ್ನನ್ನು ಎಸೆದು ಹೋದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ಯುವತಿ ಲೋನಾವಾಲಾ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಹಾಗೂ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.