×
Ad

2003-08ರ ನಡುವೆ ಮಹಾರಾಷ್ಟ್ರದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೆಸ್ಸೆಸ್ ಕೈವಾಡ; ಆರೋಪ ಪುನರುಚ್ಚರಿಸಿದ ಮಾಜಿ ಕಾರ್ಯಕರ್ತ ಶಿಂಧೆ

Thewire.in ಸಂದರ್ಶನ

Update: 2025-08-08 21:43 IST

ಯಶವಂತ್ ಶಿಂಧೆ |PC : @thewire_in

ಹೊಸದಿಲ್ಲಿ,ಆ.9: ಪರ್ಬಾನಿ, ಜಲ್ನಾ ಹಾಗೂ ಪೂರ್ನಾ ಸೇರಿದಂತೆ 2003-2008ರ ನಡುವೆ ಮಹಾರಾಷ್ಟ್ರದಲ್ಲಿ ನಡೆದ ವಿವಿಧ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೆಸ್ಸೆಸ್ ಕೈವಾಡವಿದೆಯೆಂಬ ತನ್ನ ಆರೋಪವನ್ನು ಸಂಘಟನೆಯ ಮಾಜಿ ಪೂರ್ಣಾವಧಿ ಪ್ರಚಾರಕ ಯಶವಂತ ಶಿಂಧೆ ಶುಕ್ರವಾರ ಪುನರುಚ್ಚರಿಸಿದ್ದಾರೆ.

ಆರೆಸ್ಸೆಸ್, ವಿಶ್ವಹಿಂದೂ ಪರಿಷದ್, ಬಜರಂಗದಳ ಹಾಗೂ ಬಿಜೆಪಿಗೆ ಸೇರಿದ ವ್ಯಕ್ತಿಗಳು ಈ ಸ್ಫೋಟ ಪ್ರಕರಣಗಳ ಸಂಚುಗಳನ್ನು ರೂಪಿಸಿದ್ದರು. 2004ರ ಲೋಕಸಭಾ ಚುನಾವಣೆಗೆ ಮುಂಚೆ ಮತದಾರರನ್ನು ಕೋಮು ಆಧಾರದಲ್ಲಿ ಧ್ರುವೀಕರಿಸುವುದೇ ಈ ವಿಧ್ವಂಸಕ ಕೃತ್ಯಗಳ ಹಿಂದಿರುವ ದುರುದ್ದೇಶವಾಗಿತ್ತು ಎಂದು ಅವರು ಆಪಾದಿಸಿದ್ದಾರೆ.

‘The Wire’ ಆನ್ಲೈನ್ ಸುದ್ದಿಜಾಲತಾಣಕ್ಕೆ ಈ ಬಗ್ಗೆ ವಿಸ್ತೃತ ಸಂದರ್ಶನ ನೀಡಿರುವ ಅವರು, 2004-2008ರ ನಡುವೆ ನಡೆದಿರುವ ಕೆಲವು ಬಾಂಬ್ ಸ್ಪೋಟಗಳನ್ನು ಹಿಂದುತ್ವಾದಿ ಸಂಘಟನೆಗಳ ಮುಖ್ಯವಾಹಿನಿಯಲ್ಲಿರುವ ವ್ಯಕ್ತಿಗಳೇ ಎಸಗಿದ್ದಾರೆ. ಹಿರಿಯ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಹಾಗೂ ವಿಎಚ್ಪಿ ನಾಯಕ ಮಿಲಿಂದ್ ಪರಾಂಡೆ, ಈ ಕೃತ್ಯಗಳ ಮಾಸ್ಟರ್ ಮೈಂಡ್ಗಳಾಗಿದ್ದರು ಎಂದು ಯಶವಂತ್ ಶಿಂಧೆ ಆಪಾದಿಸಿದ್ದಾರೆ.

ಬಾಂಬ್ ಸ್ಫೋಟಗಳ ಸಂಚಿನ ಯೋಜನೆಯನ್ನು 2000ನೇ ಇಸವಿಯಲ್ಲಿ ತನ್ನೊಂದಿಗೆ ಮೊದಲ ಬಾರಿ ಹಂಚಿಕೊಳ್ಳಲಾಗಿತ್ತು. ಆನಂತರ ನಾಂದೇಡ್ ನ ಗುಂಪೊಂದು ಈ ಸಂಚನ್ನು ಕಾರ್ಯಗತಗೊಳಿಸಿತ್ತು. ಇದೇ ತಂಡವು ಜಲ್ನಾ,ಪೂರ್ನಾ ಆಹಗೂ ಪರ್ಬಾನಿಗಳಲ್ಲಿ ಬಾಂಬ್ ದಾಳಿಗಳನ್ನು ನಡೆಸಿತ್ತು ಹಾಗೂ ವಿಧ್ವಂಸಕ ಕೃತ್ಯವೆಸಗುವುದಕ್ಕಾಗಿ ಔರಂಗಾಬಾದ್ ನ ಮಸೀದಿಯ ಸ್ಥಳಪರಿಶೀಲನೆ ನಡೆಸಿತ್ತು ಎಂದು ಅವರು ಹೇಳಿದ್ದಾರೆ.

2006ರಲ್ಲಿ ನಾಂದೇಡ್ ನಲ್ಲಿ ನಡೆದ ಸ್ಫೋಟದಲ್ಲಿ ಜನರು ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ಅವರು ಇತರ ಮೂರು ಸ್ಥಳಗಳಲ್ಲಿ ಬಾಂಬ್ ದಾಳಿಗಳನ್ನು ಎಸಗಿದ್ದರು. 2004ರ ಚುನಾವಣೆಗೆ ಮುಂಚೆ ಕೋಮುಗಲಭೆ ಸೃಷ್ಟಿಸುವುದೇ ಅವರ ಗುರಿಯಾಗಿತ್ತು. ಸಂಘಪರಿವಾರದ ಹಲವಾರು ವ್ಯಕ್ತಿಗಳಿಗೆ ಬಾಂಬ್ ಹಾಗೂ ಶಸ್ತ್ರಾಸ್ತ್ರಗಳ ತಯಾರಿಗೆ ತರಬೇತಿ ನೀಡಲಾಗಿತ್ತು. ರಾಕೇಶ್ ಧಾವ್ಡೆ ಹಾಗೂ ರವಿ ದೇವ್ ಅವರು ಈ ತರಬೇತಿ ಶಿಬಿರಗಳ ಪ್ರಮುಖ ವ್ಯಕ್ತಿಗಳಾಗಿದ್ದಾರು. ಮಾಲೆಗಾಂವ್ ಹಾಗೂ ಪುಣೆ-ಜಲ್ನಾ ಪ್ರಕರಣಗಳಲ್ಲಿಯೂ ಧಾವಡೆಯನ್ನು ಹೆಸರಿಸಲಾಗಿತ್ತು.ಪುಣೆ ಸಮೀಪದ ಸಿಂಹಗಢದ ತಲಾಥಿ ಎಂಬಲ್ಲಿ ಬಾಂಬ್ ತಯಾರಿಯ ಶಿಬಿರವನ್ನು ನಡೆಸಲಾಗಿತ್ತು, ಅದರಲ್ಲಿ 20-25 ಮಂದಿ ಭಾಗವಹಿಸಿದ್ದರು ಎಂಬ ವಿಷಯಗಳನ್ನು ಶಿಂಧೆ ಬಹಿರಂಗಪಡಿಸಿದ್ದಾರೆ.

ಆದರೆ ತನಿಖಾ ಏಜೆನ್ಸಿಗಳು ಹಾಗೂ ನ್ಯಾಯಾಂಗವು, ಈ ಸಂಚನ್ನು ಮುಚ್ಚಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದವು ಎಂದರು. ಸಂಘಪರಿವಾದ ಪ್ರಭಾವಿ ವ್ಯಕ್ತಿಗಳಿಗೆ ಕಾನೂನುಕ್ರಮದಿಂದ ರಕ್ಷಣೆ ದೊರೆತರೆ, ಕೆಳಸ್ತರದ ಕಾರ್ಯಕರ್ತರನ್ನು ಬಲಿಪಶುಗಳನ್ನಾಗಿ ಮಾಡಲಾಗಿತ್ತು ಎಂದು ಶಿಂಧೆ ಆಪಾದಿಸಿದರು.

ತಾನು ಗಂಭೀರವಾದ ಆರೋಪಗಳನ್ನು ಮಾಡಿದ್ದರೂ, ತನಗೆ ಈಗಲೂ ಯಾವುದೇ ಭದ್ರತೆಯನ್ನು ನೀಡಲಾಗುತ್ತಿಲ್ಲ. ನನ್ನನ್ನು ಅವರು ಯಾವುದೇ ಸಮಯದಲ್ಲಿಯೂ ಹತ್ಯೆಗೈಯಬಹುದು ಎಂದು ಶಿಂಧೆ ಆತಂಕ ವ್ಯಕ್ತಪಡಿಸಿದ್ದಾರೆ.

2006ರ ನಾಂದೇಡ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ 2003 ಹಾಗೂ 2004ರ ನಡುವೆ ಜಲ್ನಾ,ಪೂರ್ನಾ ಹಾಗೂ ಪರ್ಬಾನಿಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಸಂಘಪರಿವಾರದ ನಾಯಕರ ಕೈವಾಡವಿದೆಯೆಂದು ಆಪಾದಿಸಿದ್ದರು. ನಾಂದೇಡ್ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ತನ್ನನ್ನು ಸಾಕ್ಷಿಯಾಗಿ ಪರಿಗಣಿಸಬೇಕೆಂದು ಕೋರಿದ್ದರು. ಆದರೆ ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿತ್ತು ಹಾಗೂ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ನಿರಾಕರಿಸಿತ್ತು.

1994ರಲ್ಲಿ ಆರೆಸ್ಸೆಸ್ ಸೇರ್ಪಡೆಗೊಂಡ ಶಿಂಧೆ 1999ರಲ್ಲಿ ಬಜರಂಗದಳದ ವರಿಷ್ಠನಾಗಿ ಕಾರ್ಯನಿರ್ವಹಿಸಿದ್ದರು. 1995ರಲ್ಲಿ ಜಮ್ಮುಕಾಶ್ಮೀರದ ಆಗಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮೇಲೆ ನಡೆಸಿದ ಹಲ್ಲೆಗೆ ಯತ್ನಿಸಿದ್ದಕ್ಕಾಗಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದರು.

ಕಾಲಕ್ರಮೇಣ ಆರೆಸ್ಸೆಸ್ ಬಗ್ಗೆ ಭ್ರಮನಿರಸನಗೊಂಡ ಶಿಂಧೆ, ಸಂಘಪರಿವಾರದಿಂದ ದೂರಸರಿದರು. ಆರೆಸ್ಸೆಸ್ ಸಂಸ್ಥಾಪಕ ಡಾ.ಕೆ. ಹೆಡಗೆವಾರ್ ಅವರ ಉತ್ತಮ ಹಾಗೂ ಸದೃಢ ಪ್ರಜೆಗಳನ್ನು ನಿರ್ಮಿಸುವ ಕನಸುಕಂಡಿದ್ದರು. ಆದರೆ ಅವರ ಆದರ್ಶಗಳು ಹಾಗೂ ವಾಸ್ತವತೆ ನಡುವೆ ಮೈಲುಗಟ್ಟಲೆ ಅಂತರವಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News