ಮಹಾರಾಷ್ಟ್ರ | 21 ವರ್ಷದ ಯುವಕನ ಥಳಿಸಿ ಹತ್ಯೆ
ಸಾಂದರ್ಭಿಕ ಚಿತ್ರ
ಮುಂಬೈ, ಆ. 13: ಮಹಾರಾಷ್ಟ್ರದ ಜಾಮನೇರ್ ತಾಲೂಕಿನ ಛೋಟಿ ಬೆಟವಾಡ್ ನ ನಿವಾಸಿ 21 ವರ್ಷದ ಸುಲೇಮಾನ್ ರಹೀಮ್ ಖಾನ್ ಅವರನ್ನು ಸೋಮವಾರ ಗುಂಪೊಂದು ಅಪಹರಿಸಿ, ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆಗೈದಿದೆ ಎಂದು ‘ಮಖ್ತೂಬ್ ಮೀಡಿಯಾ’ ವರದಿ ಮಾಡಿದೆ.
ಪ್ರತ್ಯಕ್ಷ ಸಾಕ್ಷಿಯ ಉಲ್ಲೇಖಿಸಿದ ವರದಿಯ ಪ್ರಕಾರ, ಜಾಮನೇರ್ ಪೊಲೀಸ್ ಠಾಣೆಯಿಂದ ಕೇವಲ ಮೀಟರ್ ದೂರದಲ್ಲಿರುವ ಕೆಫೆಯೊಂದರಲ್ಲಿ ಸುಲೇಮಾನ್ ಇನ್ನೊಂದು ಸಮುದಾಯದ 17 ವರ್ಷದ ಬಾಲಕಿಯೊಂದಿಗೆ ಇದ್ದಾಗ 9ರಿಂದ 15 ಮಂದಿಯಿದ್ದ ಗುಂಪೊಂದು ಅವರನ್ನು ವಾಹನದಲ್ಲಿ ಅಪಹರಿಸಿತು. ವಿವಿಧ ಸ್ಥಳಗಳಿಗೆ ಕರೆದೊಯ್ದಿತು, ಹಲ್ಲೆ ನಡೆಸಿತು. ಅನಂತರ ಅವರ ಮನೆಯ ಬಾಗಿಲಲ್ಲಿ ಎಸೆಯಿತು.
ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಸುಲೇಮಾನ್ ಗೆ ನೆರವು ನೀಡಲು ಪ್ರಯತ್ನಿಸಿದ ಆತನ ಕುಟುಂಬದ ಮೇಲೆ ಕೂಡ ಗುಂಪು ಹಲ್ಲೆ ನಡೆಸಿತು. ಇದರಿಂದ ಅವರ ತಂದೆ, ತಾಯಿ ಹಾಗೂ ಸಹೋದರಿ ಗಾಯಗೊಂಡಿದ್ದಾರೆ.
ಸುಲೇಮಾನ್‌ನನ್ನು ಜಲಗಾಂವ್ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ವೈದ್ಯರು ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಪೊಲೀಸರ ಪ್ರಕಾರ ದೊಣ್ಣೆ, ಕಬ್ಬಿಣದ ರಾಡ್ ಹಾಗೂ ಕೈಯಿಂದ ಸುಲೇಮಾನ್ ಮೇಲೆ ಹಲ್ಲೆ ನಡೆಸಲಾಗಿದೆ. ಇದರಿಂದ ಆತನ ಆಂತರಿಕ ಅವಯವಗಳಿಗೆ ಘಾಸಿಯಾಗಿವೆ.
ಸುಲೇಮಾನ್ ಇತ್ತೀಚೆಗೆ 12ನೇ ತರಗತಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದ. ಪೊಲೀಸ್ ಸೇವೆ ಸೇರಲು ಸಿದ್ಧತೆ ನಡೆಸುತ್ತಿದ್ದ. ದಾಳಿಯ ದಿನ ಆತ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಜಾಮನೇರ್ ಗೆ ತೆರಳುತ್ತಿದ್ದ.
‘‘ನನ್ನ ಮಗನ ದೇಹದಲ್ಲಿ ಗಾಯಗಳಿಲ್ಲದ ಇಂಚು ಜಾಗ ಕೂಡ ಇರಲಿಲ್ಲ. ಅವರು ಥಳಿಸಿ ಬಿಟ್ಟು ಹೋದರು. ನಾವು ಆತನನ್ನು ರಕ್ಷಿಸಲು ಓಡಿ ಹೋದಾಗ ಅವರು ನನ್ನ ಮೇಲೆ, ನನ್ನ ಪತ್ನಿ ಹಾಗೂ ಪುತ್ರಿಯ ಮೇಲೆ ಹಲ್ಲೆ ನಡೆಸಿದರು. ಸುಲೇಮಾನ್ ನನ್ನ ಏಕ ಮಾತ್ರ ಪುತ್ರ. ಅಪರಾಧಿಗಳು ಅತ್ಯಂತ ಕಠಿಣ ಶಿಕ್ಷೆಯನ್ನು ಅನುಭವಿಸುವ ವರೆಗೆ ನಾನು ವಿಶ್ರಮಿಸುವುದಿಲ್ಲ’’ ಎಂದು ಸುಲೇಮಾನ್ ನ ತಂದೆ ರಹೀಮ್ ಖಾನ್ ಹೇಳಿರುವುದನ್ನು ‘ಮಖ್ತೂಬ್ ಮೀಡಿಯಾ’ ವರದಿ ಉಲ್ಲೇಖಿಸಿದೆ.
ಈ ಹತ್ಯೆ ಜಾಮ್ನೇರ್ ನಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ಸುಲೇಮಾನ್ ಸಂಬಂಧಿಕರು ಹಾಗೂ ಸಮುದಾಯದ ನಾಯಕರು ದಾಳಿಕೋರರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಸೇರಿದಂತೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ವರದಿಯ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಐವರು ಶಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಮಹೇಶ್ವರ ರೆಡ್ಡಿ ಮಾಹಿತಿ ನೀಡಿದ್ದಾರೆ.
‘‘ನಾವು ಈಗಲೂ ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದೇವೆ. ದಾಳಿಗೆ ನಿಖರವಾದ ಕಾರಣವನ್ನು ಈಗ ಹೇಳಲು ಸಾಧ್ಯವಿಲ್ಲ. ಜಾಮನೇರ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕ್ರೈಮ್ ಬ್ರಾಂಚ್ ಹಾಗೂ ನಾಸಿಕ್ ರೇಂಜ್‌ನ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗಿದೆ’’ ಎಂದು ಇನ್ಸ್‌ಪೆಕ್ಟರ್ ಹೇಳಿರುವುದನ್ನು ‘ಮಖ್ತೂಬ್ ಮೀಡಿಯಾ’ ಉಲ್ಲೇಖಿಸಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಹತ್ಯೆ, ಅಪಹರಣ, ಗಲಭೆ ಹಾಗೂ ಕಾನೂನು ಬಾಹಿರ ಗುಂಪು ಸೇರುವಿಕೆಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.