×
Ad

ಮಹಾರಾಷ್ಟ್ರ | ಮತದಾರರ ಪಟ್ಟಿಯಲ್ಲಿ ಆರು ಸಲ ಒಬ್ಬಳೇ ಮಹಿಳೆಯ ಹೆಸರು!

Update: 2025-08-15 20:34 IST

 Photo: X/@AbhishekSay.

ಪುಣೆ,ಆ.15: ಮಹಾರಾಷ್ಟ್ರ ಪಾಲ್ಘರ್ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ 39ರ ಹರೆಯದ ಮಹಿಳೆಯೋರ್ವಳ ಹೆಸರು ಆರು ಸಲ ಕಾಣಿಸಿಕೊಂಡಿದ್ದು, ಜಿಲ್ಲಾಧಿಕಾರಿ ಇಂದು ಜಾಖಡ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಮಹಿಳೆಯ ಹೆಸರು ಒಂದೇ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಐದು ಸಲ ಮತ್ತು ಇನ್ನೊಂದು ಮತಗಟ್ಟೆಯಲ್ಲಿ ಒಂದು ಸಲ ಕಾಣಿಸಿಕೊಂಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಇದು ಬಹಿರಂಗಗೊಂಡ ಬಳಿಕ ರಾಜ್ಯದ ಮುಖ್ಯ ಚುನಾವಣಾಧಿಕಾರಿ(ಸಿಇಒ)ಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸಿಇಒ ಕಚೇರಿಯು ವಿಶೇಷ ಸಭೆಯನ್ನು ಕರೆದು ಈ ಸಮಸ್ಯೆಯನ್ನು ಬಗೆಹರಿಸಲು ಕೈಗೊಂಡ ಕ್ರಮಗಳ ಕುರಿತು ವಿವರವಾದ ಮಾಹಿತಿಯನ್ನು ಕೇಳಿದೆ.

ನಕಲು ನಮೂದುಗಳನ್ನು ಅಳಿಸುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಜಾಖಡ್ ಸುದ್ದಿಸಂಸ್ಥೆಗೆ ತಿಳಿಸಿದರು.

ಹೆಸರು ಒಂದಕ್ಕಿಂತ ಹೆಚ್ಚು ಬಾರಿ ದಾಖಲಾಗಲು ಕಾರಣವಾದ ಸಂದರ್ಭಗಳನ್ನು ವಿವರಿಸಿದ ಉಪ ಚುನಾವಣಾಧಿಕಾರಿ ತೇಜಸ್ ಚವಾಣ್ ಅವರು, ಪಾಲ್ಘರ್ ಜಿಲ್ಲೆಯ ನಾಲಾಸೋಪರ್ ವಿಧಾನಸಭಾ ಕ್ಷೇತ್ರದ ನಿವಾಸಿಯಾಗಿರುವ ಮಹಿಳೆ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳಲು ಜ.2024ರಲ್ಲಿ ಆನ್‌ಲೈನ್ ಮೂಲಕ ಫಾ.6ನ್ನು ಸಲ್ಲಿಸಿದ್ದರು. ಫಾರ್ಮ್ ಸಲ್ಲಿಸಿದ ತಕ್ಷಣ ಮತದಾರರ ಗುರುತಿನ ಚೀಟಿಯನ್ನು ನೀಡಲಾಗುತ್ತದೆ ಎಂದು ಭಾವಿಸಿದ್ದ ಅವರು ಅನುದ್ದಿಷ್ಟವಾಗಿ ಫಾರ್ಮ್‌ನ್ನು ಆರು ಸಲ ಸಲ್ಲಿಸಿದ್ದರು ಎಂದು ತಿಳಿಸಿದರು.

ಮುಂಬರುವ ಮತದಾರರ ಪಟ್ಟಿಗಳ ಪರಿಷ್ಕರಣೆ ಸಮಯದಲ್ಲಿ ಕಟ್ಟುನಿಟ್ಟಿನ ಪರಿಶೀಲನೆಯನ್ನು ಕೈಗೊಳ್ಳುವಂತೆ ಮತ್ತು ನಕಲು ನಮೂದುಗಳನ್ನು ತೆಗೆದುಹಾಕುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್ಲ ಏಜೆನ್ಸಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಜಿಲ್ಲಾಡಳಿತವು ಹೇಳಿಕೆಯಲ್ಲಿ ತಿಳಿಸಿದೆ.

ರಾಹುಲ್ ಗಾಂಧಿಯವರ ಆರೋಪಗಳ ನಡುವೆ ಈ ಪ್ರಕರಣ ಬೆಳಕಿಗೆ ಬಂದಿದ್ದು,ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವನೆಗಳಿಗೆ ಮುನ್ನ ಮತದಾರರ ಪಟ್ಟಿಗಳ ಸಮಗ್ರತೆಯ ಕುರಿತು ಕಳವಳಗಳನ್ನು ಹೆಚ್ಚಿಸಿದೆ ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News