×
Ad

ಮಹಾರಾಷ್ಟ್ರ: ಪತ್ನಿಯ ಶಿರಚ್ಛೇದಗೈದು ದೇಹವನ್ನು 17 ತುಂಡುಗಳಾಗಿ ಕತ್ತರಿಸಿ ಎಸೆದವನ ಸೆರೆ

Update: 2025-09-05 20:00 IST
PC : NDTV

ಮುಂಬೈ,ಸೆ.5: ಮಹಾರಾಷ್ಟ್ರದ ಭಿವಂಡಿ ನಗರದಲ್ಲಿ ಪತ್ನಿಯ ಶಿರಚ್ಛೇದಗೈದು, ದೇಹವನ್ನು 17 ತುಂಡುಗಳನ್ನಾಗಿ ಕತ್ತರಿಸಿ ಎಲ್ಲೆಂದರಲ್ಲಿ ಎಸೆದಿದ್ದ ಪಾತಕಿಯನ್ನು ಪೋಲಿಸರು ಬಂಧಿಸಿದ್ದಾರೆ.

ಆರೋಪಿ ತಾಹಾ ತನ್ನ ಹೇಳಿಕೆಯನ್ನು ನಿರಂತರವಾಗಿ ಬದಲಿಸುತ್ತಿರುವುದರಿಂದ ಕೊಲೆಯ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಸುಮಾರು 25ರಿಂದ 28 ವರ್ಷ ವಯಸ್ಸಿನ ಮಹಿಳೆಯದು ಎಂದು ಶಂಕಿಸಲಾಗಿದ್ದ ತಲೆ ಆ.30ರಂದು ಈದ್ಗಾ ರೋಡ್ ಕೊಳಗೇರಿಯ ಕಸಾಯಿಖಾನೆ ಪರಿಸರದಲ್ಲಿ ಪತ್ತೆಯಾಗಿತ್ತು.

ತನ್ನ ಪತ್ನಿ ಪರ್ವೀನ್ ಅಲಿಯಾಸ್ ಮುಸ್ಕಾನ್ ತಹಾ ಅನ್ಸಾರಿಯನ್ನು ಕೊಲೆಗೈದ ಬಳಿಕ, ದೇಹದ ಭಾಗಗಳನ್ನು ನಗರದಾದ್ಯಂತ ಎಸೆದಿದ್ದಾಗಿ ತಾಹಾ ತನಿಖೆ ವೇಳೆ ಪೋಲಿಸರಿಗೆ ತಿಳಿಸಿದ್ದಾನೆ. ದೇಹವನ್ನು 17 ತುಂಡುಗಳನ್ನಾಗಿ ಕತ್ತರಿಸಿದ್ದೆ ಎಂದೂ ಆತ ಹೇಳಿದ್ದಾನೆ.

ದೇಹದ ಉಳಿದ ಭಾಗಗಳನ್ನು ಪತ್ತೆ ಹಚ್ಚಲು ಪೋಲಿಸರು ಪ್ರಯತ್ನಿಸುತ್ತಿದ್ದು, ಡ್ರೋನ್‌ಗಳು ಮತ್ತು ಅಗ್ನಿಶಾಮಕ ದಳಗಳನ್ನು ಇದಕ್ಕಾಗಿ ನಿಯೋಜಿಸಲಾಗಿದೆ.

ಮುಸ್ಕಾನ್ ತಾಯಿ ಹನೀಫಾ ಖಾನ್ ಮಗಳ ನಾಪತ್ತೆ ಕುರಿತು ದೂರು ಸಲ್ಲಿಸಿದಾಗ ಈ ಘಟನೆಯು ಬೆಳಕಿಗೆ ಬಂದಿತ್ತು.

ಎರಡು ದಿನಗಳಿಂದ ತನ್ನ ಮಗಳ ಫೋನ್ ಸ್ವಿಚ್ ಆಫ್ ಆಗಿದೆ, ಅಳಿಯ ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದು ಹನೀಫಾ ದೂರಿನಲ್ಲಿ ತಿಳಿಸಿದ್ದರು. ಕತ್ತರಿಸಲಾದ ತಲೆ ತನ್ನ ಮಗಳದ್ದು ಎಂದು ಆಕೆ ಗುರುತಿಸಿದ್ದರು.

ಕೊಲೆಯ ಉದ್ದೇಶ ಮತ್ತು ಎಲ್ಲಿ ಕೊಲೆ ನಡೆದಿತ್ತು ಎನ್ನುವುದನ್ನು ತಿಳಿದುಕೊಳ್ಳಲು ಪೋಲಿಸರು ಪ್ರಯತ್ನಿಸುತ್ತಿದ್ದಾರೆ. ಕೊಲೆಗೆ ಬಳಸಿದ್ದ ಆಯುಧ ಇನ್ನೂ ಪತ್ತೆಯಾಗಿಲ್ಲ. ಪ್ರಕರಣದ ತನಿಖೆಗಾಗಿ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News