ಮಹಾರಾಷ್ಟ್ರ | ಬದ್ಲಾಪುರ ಪ್ರಕರಣದ ನಂತರ ಮಕ್ಕಳ ಸುರಕ್ಷತೆ ಕುರಿತು ಕಾಟಾಚಾರದ ಕ್ರಮ: ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ತರಾಟೆ
ಬಾಂಬೆ ಹೈಕೋರ್ಟ್ | PC : PTI
ಮುಂಬೈ: ಶಾಲೆಗಳಲ್ಲಿ ಮಕ್ಕಳನ್ನು ರಕ್ಷಿಸಲು ಇರುವ ತನ್ನದೇ ಆದ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದ್ದಕ್ಕೆ ಶುಕ್ರವಾರ ಮಹಾರಾಷ್ಟ್ರ ಸರಕಾರವನ್ನು ಬಾಂಬೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಕಳೆದ ವರ್ಷ ಬದ್ಲಾಪುರದಲ್ಲಿ ಇಬ್ಬರು ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ನಂತರ, ಶಾಲೆಗಳನ್ನು ಸುರಕ್ಷಿತ ವಲಯಗಳು ಎಂದು ಘೋಷಿಸಿ ಈ ವರ್ಷದ ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.
ಆದರೆ, ರಾಜ್ಯದಲ್ಲಿನ ಪ್ರಗತಿಯ ಕುರಿತು ನ್ಯಾ. ರೇವತಿ ಮೋಹಿತೆ ಡೇರೆ ಮತ್ತು ನ್ಯಾ. ಸಂದೇಶ್ ಬಿ.ಪಾಟೀಲ್ ಅವರನ್ನೊಳಗೊಂಡು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
“ನೀವು ಮತ್ತೊಂದು ಘಟನೆ ಆಗಲಿ ಎಂದು ಕಾಯುತ್ತಿದ್ದೀರಿ ಹಾಗೂ ಆನಂತರ ನೀವು ಜಾಗೃತರಾಗುತ್ತೀರಾ? ನಿಮ್ಮ ಸರಕಾರಿ ಶಾಲೆಗಳಲ್ಲೇ ನೀವು ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡಿತು.
ಕಳೆದ ವರ್ಷ ಬದ್ಲಾಪುರದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಘಟನೆಯ ನಂತರ, ಶಾಲಾ ಸುರಕ್ಷತೆಯ ಬಗ್ಗೆ ವ್ಯಾಪಕ ಕಳವಳ ವ್ಯಕ್ತವಾದ ಬೆನ್ನಿಗೇ, ಮೇ 2025ರಲ್ಲಿ ಈ ಪ್ರಕರಣದ ವಿಚಾರಣೆಯನ್ನು ಇದೇ ನ್ಯಾಯಪೀಠ ಕೈಗೆತ್ತಿಕೊಂಡಿತ್ತು. ಇದರ ಬಳಿಕ, ಎಲ್ಲ ಶಾಲೆಗಳೂ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಕ್ರೀಡಾ ಇಲಾಖೆ ಸರಕಾರಿ ನಿರ್ಣಯವನ್ನು ಜಾರಿಗೊಳಿಸಿತ್ತು. ಇದು ಮಹಾರಾಷ್ಟ್ರ ಸರಕಾರದ ಅಧಿಕೃತ ಆದೇಶವಾಗಿತ್ತು.
ಈ ವಿಷಯದಲ್ಲಿ ಪ್ರಗತಿಯಾಗಿದೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿದರೂ, ಹಲವಾರು ಪ್ರಮುಖ ಸುರಕ್ಷತಾ ಕ್ರಮಗಳು ನಾಪತ್ತೆಯಾಗಿವೆ ಎಂದು ನ್ಯಾಯಾಲಯ ಬೊಟ್ಟು ಮಾಡಿತ್ತು. ಈ ಸಂಬಂಧ ನ್ಯಾಯಾಲಯಕ್ಕೆ ವರದಿಯೊಂದನ್ನು ಸಲ್ಲಿಸಿದ್ದ ಅಮಿಕಸ್ ಕ್ಯೂರಿ ರೆಬೆಕಾ ಗೊನ್ಸಾಲ್ವಿಸ್ ಬಹುತೇಕ ಶಾಲೆಗಳಲ್ಲಿ ದೂರು ಪೆಟ್ಟಿಗೆಗಳನ್ನು ಸ್ಥಾಪಿಸಲಾಗಿದ್ದರೂ, ಇನ್ನೂ ಇತರ ಪ್ರಮುಖ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.