ಮಹಾರಾಷ್ಟ್ರ | 24 ಗಂಟೆಯೂ ತೆರೆದಿರಲು ಅಂಗಡಿ, ಹೋಟೆಲ್‌ಗಳಿಗೆ ಅನುಮತಿ
Update: 2025-10-03 21:45 IST
ಸಾಂದರ್ಭಿಕ ಚಿತ್ರ
ಮುಂಬೈ,ಅ.3: ರಾಜ್ಯಾದ್ಯಂತ ಅಂಗಡಿಗಳು ಹಾಗೂ ಲಾಡ್ಜ್‌ಗಳು, ರೆಸ್ಟೋರಂಟ್‌ಗಳು, ಚಿತ್ರಮಂದಿರಗಳು, ಸಾರ್ವಜನಿಕ ಮನೋರಂಜನಾ ತಾಣಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು ದಿನದ 24 ಗಂಟೆಯೂ ಕಾರ್ಯಾಚರಿಸಲು ಮಹಾರಾಷ್ಟ್ರ ಸರಕಾರವು ಅನುಮತಿ ನೀಡಿದೆ.
ಆದರೆ, ಅ.1ರಂದು ಹೊರಡಿಸಲಾದ ಸರಕಾರಿ ನಿರ್ಣಯದಲ್ಲಿ ಮದ್ಯದಂಗಡಿಗಳು, ಬಿಯರ್ ಬಾರ್‌ಗಳು, ಡ್ಯಾನ್ಸ್ ಬಾರ್‌ಗಳು, ಹುಕ್ಕಾ ಪಾರ್ಲರ್‌ಗಳು, ಡಿಸ್ಕೋಥೆಕ್‌ಗಳು ಮತ್ತು ಪರ್ಮಿಟ್ ಬಾರ್‌ಗಳು ದಿನದ 24 ಗಂಟೆಯೂ ಕಾರ್ಯಾಚರಿಸಲು ಅನುಮತಿ ನೀಡಲಾಗಿಲ್ಲ. ಅವುಗಳಿಗೆ ನಿಗದಿತ ಕೆಲಸದ ಅವಧಿ ಮುಂದುವರಿಯಲಿದೆ.
ಪ್ರತಿ ಉದ್ಯೋಗಿಗೂ ವಾರಕ್ಕೆ ಕನಿಷ್ಠ ಒಂದು ದಿನದ ರಜೆ ನೀಡಬೇಕೆಂಬ ಷರತ್ತಿಗೆ ಒಳಪಟ್ಟು ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ವಾರದ ಎಲ್ಲ ದಿನಗಳಲ್ಲಿಯೂ ಕಾರ್ಯಾಚರಿಸಬಹುದು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.