ಮಹಾರಾಷ್ಟ್ರ | ಮರಾಠ ಮೀಸಲಾತಿ ಕುರಿತ ನಿಲುವಿಗೆ ಅಂಟಿಕೊಂಡ ಜರಾಂಗೆ: ಇಕ್ಕಟ್ಟಿಗೆ ಸಿಲುಕಿದ ಸರಕಾರ
ಮತ್ತೊಂದು ದಿನ ಅನುಮತಿ ವಿಸ್ತರಣೆ
ಮನೋಜ್ ಜರಾಂ | PC : PTI
ಮುಂಬೈ: ಮರಾಠ ಮೀಸಲಾತಿ ಕುರಿತ ತಮ್ಮ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿರುವ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ, ಸೋಮವಾರದಿಂದ ನೀರು ಸೇವಿಸುವುದನ್ನೂ ಸ್ಥಗಿತಗೊಳಿಸಲಿದ್ದೇನೆ ಎಂದು ಘೋಷಿಸಿದ್ದಾರೆ.
ಇದರೊಂದಿಗೆ ಪ್ರತಿಭಟನಾಕಾರರಿಗೆ ವಾಂಖೆಡೆ ಕ್ರೀಡಾಂಗಣವನ್ನು ತೆರೆಯಬೇಕು ಎಂದೂ ಆಗ್ರಹಿಸಿದ್ದಾರೆ. ಸದ್ಯ ಈ ಬೇಡಿಕೆಗೆ ಯಾವುದೇ ಪರಿಹಾರ ಕಂಡು ಬಾರದಿರುವುದರಿಂದ ಬಿಜೆಪಿ ನೇತೃತ್ವದ ಮಹಾಯುತಿ ಸರಕಾರ ಇಕ್ಕಟ್ಟಿಗೆ ಸಿಲುಕಿದ್ದು, ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಮುಂಬೈ ತೆವಳತೊಡಗಿದೆ.
11 ದಿನಗಳ ಗಣೇಶೋತ್ಸವದ ಐದನೆಯ ದಿನ ರವಿವಾರ ಮುಗಿದಿದ್ದು, ಭಾರಿ ಸಂಖ್ಯೆಯ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಲಾಗಿದೆ. ಜನರು ತಮ್ಮ ಕೆಲಸ ಕಾರ್ಯಗಳಿಗೆ ಮರಳಲಿದ್ದು, ರಸ್ತೆ ಮೇಲಿನ ಜನದಟ್ಟಣೆ ಅಧಿಕವಾಗಲಿದೆ. ಇದಲ್ಲದೆ, ತಮ್ಮ ತವರು ಗ್ರಾಮಗಳಿಗೆ ತೆರಳಿರುವ ಜನರು ಈ ವಾರದಲ್ಲಿ ಮುಂಬೈಗೆ ಮರಳಲಿದ್ದಾರೆ.
ಆಝಾದ್ ಮೈದಾನದಲ್ಲಿ ಧರಣಿ ನಡೆಸುತ್ತಿರುವ ಮನೋಜ್ ಜರಾಂಗೆ, “ನಾನು ಉಪವಾಸ ಸತ್ಯಾಗ್ರಹ ಆರಂಭಿಸಿ ಮೂರು ದಿನಗಳಾದವು. ನಾಳೆಯಿಂದ ನೀರು ಸೇವಿಸುವುದನ್ನು ನಿಲ್ಲಿಸಲಿದ್ದೇನೆ. ನೀವು ಗಾಬರಿಯಾಗಬೇಕಾದ ಅಗತ್ಯವಿಲ್ಲ. ಏನೂ ಆಗುವುದಿಲ್ಲ. ನಾವು ಮೀಸಲಾತಿಯನ್ನು ಪಡೆಯುತ್ತೇವೆ. ಆಗ ಮಾತ್ರ ನಾನು ಮುಂಬೈ ತೊರೆಯಲಿದ್ದೇನೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದಲ್ಲದೆ, ಮಹಾರಾಷ್ಟ್ರದಾದ್ಯಂತ ಆಗಮಿಸುತ್ತಿರುವ ಪ್ರತಿಭಟನಾಕಾರರಿಗೆ ಸೂರು, ಆಹಾರ ಹಾಗೂ ವಿಶ್ರಾಂತಿಯನ್ನು ಒದಗಿಸಲು, ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಆಜಾದ್ ಮೈದಾನ ಪ್ರತಿಭಟನಾ ಸ್ಥಳದ ಸಮೀಪವಿರುವ ವಾಂಖೆಡೆ ಕ್ರೀಡಾಂಗಣ ಹಾಗೂ ಇನ್ನಿತರ ಕ್ರೀಡಾ ಮೈದಾನಗಳನ್ನು ತೆರೆಯಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಹೀಗೆ ಮಾಡುವುದರಿಂದ, ಪ್ರತಿಭಟನಾಕಾರರ ವಾಹನಗಳು ಸುರಕ್ಷಿತವಾಗಿರಲಿವೆ ಹಾಗೂ ಅವರು ಅಲ್ಲಿ ವಿಶ್ರಾಂತಿಯನ್ನೂ ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುಂಬೈನಲ್ಲೇ ಇದ್ದು, ಕ್ರಮವಾಗಿ ಸತಾರ ಹಾಗೂ ಪುಣೆಗೆ ತೆರಳಿರುವ ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂದೆ ಹಾಗೂ ಅಜಿತ್ ಪವಾರ್ ಕೂಡಾ ಮುಂಬೈಗೆ ಮರಳುತ್ತಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಬೆಳವಣಿಗೆಯೊಂದರಲ್ಲಿ, ಮರಾಠ ಸಮುದಾಯದ ಬೇಡಿಕೆಗಳಿಗಾಗಿ ರಚಿಸಲಾಗಿರುವ 12 ಮಂದಿ ಸದಸ್ಯರ ಸಚಿವ ಸಂಪುಟ ಉಪಸಮಿತಿಯ ಮುಖ್ಯಸ್ಥ ಹಾಗೂ ಜಲ ಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ-ಪಾಟೀಲ್ ಅವರು ಸರಣಿ ಸಭೆಗಳನ್ನು ನಡೆಸಿದ್ದು, ಕುಣಬಿ, ಮರಾಠ ಕುಣಬಿ ಹಾಗೂ ಕುಣಬಿ ಮರಾಠ ಜಾತಿಗಳ ಪ್ರಮಾಣ ಪತ್ರವನ್ನು ಮರಾಠ ಸಮುದಾಯದ ಅರ್ಹ ಸಮುದಾಯಗಳಿಗೆ ವಿತರಿಸುವುದನ್ನು ಕಡ್ಡಾಯಗೊಳಿಸಿರುವ ಅಡ್ವೊಕೇಟ್ ಜನರಲ್ ಡಾ. ಬಿರೇಂದ್ರ ಸರಾಫ್ ಹಾಗೂ ನಿವೃತ್ತ ನ್ಯಾಯಮೂರ್ತಿ ಸಂದೀಪ್ ಶಿಂದೆ ಅವರೊಂದಿಗೆ ಸಮಾಲೋಚನಾ ಸಭೆಯನ್ನೂ ನಡೆಸಿದ್ದಾರೆ.
ಈ ನಡುವೆ, ಆಝಾದ್ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಮುಂಬೈ ಪೊಲೀಸರು ಮತ್ತೊಂದು ದಿನ ಅನುಮತಿಯನ್ನು ವಿಸ್ತರಿಸಿದ್ದಾರೆ.