×
Ad

ಮಹಾರಾಷ್ಟ್ರ | ಸಚಿವರಿಂದ ಹಿಂದೂಗಳಿಗಾಗಿಯೇ ರೂಪಿಸಿದ 'ಕಾಲ್ ಹಿಂದೂ' ಜಾಬ್ ಪೋರ್ಟಲ್ ಉದ್ಘಾಟನೆ

Update: 2025-05-05 10:30 IST

ಮಂಗಲ್ ಪ್ರಭಾತ್ ಲೋಧಾ | PC :  X \ @MPLodha

ಮುಂಬೈ: ಮಹಾರಾಷ್ಟ್ರದ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರು ಕಳೆದ ವಾರ ಹಿಂದೂಗಳಿಗಾಗಿಯೇ ವಿನ್ಯಾಸ ಮಾಡಿದ "ಕಾಲ್ ಹಿಂದೂ ಜಾಬ್ಸ್" ಎಂಬ ಡಿಜಿಟಲ್ ಉದ್ಯೋಗ ವೇದಿಕೆಯನ್ನು ಉದ್ಘಾಟಿಸಿದ್ದಾರೆ.

ವೆಬ್‌ಸೈಟ್ ಇನ್ನೂ ಕಾರ್ಯನಿರ್ವಹಿಸಬೇಕಾಗಿದೆ.

ಈ ವೆಬ್ ಸೈಟ್ ಅನ್ನು ಹಿಂದೂ ಜಾಗರಣ್ ಮಂಚ್ ಸದಸ್ಯ ಮತ್ತು ಭಾರತೀಯ ಜನತಾ ಪಕ್ಷದ ಯುವ ನಾಯಕ ವಿಶಾಲ್ ದುರಾಫೆ ಅವರು ಅಭಿವೃದ್ಧಿಪಡಿಸಿದ್ದಾರೆ ಎಂದು the print ವರದಿ ಮಾಡಿದೆ.

ಹಿಂದೂ ಜಾಗರಣ್ ಮಂಚ್, ಬಿಜೆಪಿಯ ಮಾತೃ ಸಂಘಟನೆಯಾದ ಆರೆಸ್ಸೆಸ್ ನೊಂದಿಗೆ ಕಾರ್ಯ ನಿರ್ವಹಿಸುವ ಸಂಘ ಪರಿವಾರದ ಗುಂಪಾಗಿದೆ.

ಕಳೆದ ಬುಧವಾರ ಉದ್ಯೋಗ ಪೋರ್ಟಲ್ ಅನ್ನು ಉದ್ಘಾಟಿಸಿದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯ ಸಚಿವರಾಗಿರುವ ಲೋಧಾ, ಈ ಪೋರ್ಟಲ್ ಯುವಕರಿಗೆ ಉದ್ಯೋಗಗಳನ್ನು ಹುಡುಕಲು ಮತ್ತು ಅವರಿಗೆ ಸ್ವಯಂ ಉದ್ಯೋಗದ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಈ ಪೋರ್ಟಲ್ ಮುಖಾಂತರ ಮಾರ್ಕೆಟಿಂಗ್ ಬಗ್ಗೆ ತರಬೇತಿಯೂ ಸಿಗಲಿದೆ. ದುರಾಫೆ ಉತ್ತಮ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗದ ಅಗತ್ಯವಿದೆ. ನಾನು ಉದ್ಯೋಗ ಖಾತೆಯನ್ನು ಹೊಂದಿರುವುದರಿಂದ ಇದನ್ನು ಉದ್ಘಾಟಿಸಿದ್ದೇನೆ ಎಂದು ಲೋಧಾ ಹೇಳಿದರು.

ಸರ್ಕಾರದ ಪ್ರತಿನಿಧಿಗಳು ಹಿಂದೂಗಳಿಗೆ ಮಾತ್ರ ಅನುಕೂಲವಾಗುವ ಯೋಜನೆಗಳನ್ನು ಉತ್ತೇಜಿಸುವುದು ಸೂಕ್ತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಲೋಧಾ, “ಯಾರಾದರೂ ಹಿಂದೂ ಸಮುದಾಯಕ್ಕೆ ಮಾತ್ರ ಬೇಕಾದ ರಚನಾತ್ಮಕ ಕೆಲಸ ಮಾಡಲು ನಿರ್ಧರಿಸಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ನಾಳೆ ಬೇರೆ ಯಾವುದೇ ಸಮುದಾಯವು ಇದೇ ರೀತಿಯ ಯೋಜನೆಗಳೊಂದಿಗೆ ಮುಂದೆ ಬಂದರೆ, ಸರ್ಕಾರವು ಅವರನ್ನು ಬೆಂಬಲಿಸುತ್ತದೆ” ಎಂದು ಹೇಳಿದರು, ಎಂದು deccan herald ವರದಿ ಮಾಡಿದೆ.

“ಅವರ ಸ್ವಂತ ಇಚ್ಚೆಯಂತೆ ಅವರು ಪೋರ್ಟಲ್ ಅನ್ನು ಹಿಂದೂಗಳಿಗಾಗಿ ಎಂದು ವಿನ್ಯಾಸ ಮಾಡಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಯಾರಾದರೂ ಅದನ್ನು ಬಳಸಿದರೆ, ಅಪ್ಲಿಕೇಶನ್ ಅವರನ್ನು ಬಳಸುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ”, ಎಂದು ಅವರು ಹೇಳಿದ್ದಾರೆ.

ಹಿಂದೂಗಳಿಗೆ ಉದ್ಯೋಗ ಒದಗಿಸುವುದು ಮತ್ತು ಸಮುದಾಯದ ಉದ್ಯಮಿಗಳಿಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲಗಳನ್ನು ಒದಗಿಸುವುದು ಪೋರ್ಟಲ್‌ನ ಉದ್ದೇಶವಾಗಿದೆ ಎಂದು ವೆಬ್‌ ಸೈಟ್ ನ ದುರಾಫೆ ಹೇಳಿರುವುದಾಗಿ Deccan herald ವರದಿ ಮಾಡಿದೆ.

ಸ್ವ-ಉದ್ಯೋಗ, ಇ-ಕಾಮರ್ಸ್ ಮತ್ತು ವಿವಾಹದಂತಹ ಹೆಚ್ಚಿನ ವಿಭಾಗಗಳನ್ನು ಪೋರ್ಟಲ್‌ಗೆ ಸೇರಿಸುವ ಯೋಚನೆಯೂ ಇದೆ ಎಂದು ವಿಶಾಲ್ ದುರಾಫೆ ಹೇಳಿದ್ದಾರೆ.

ಹಿಂದೂಗಳು ಮಾತ್ರ ವೆಬ್‌ಸೈಟ್‌ ನಲ್ಲಿ ಉದ್ಯೋಗ ಹುಡುಕುವುದು, ಅವರಿಗೆ ಮಾತ್ರ ಉದ್ಯೋಗ ನೀಡುವುದೇ ಎಂದು ಕೇಳಿದಾಗ, ಆ ರೀತಿ ಏನೂ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಒಂದು ಸಮುದಾಯಕ್ಕಾಗಿ ಮಾತ್ರ ವಿನ್ಯಾಸಗೊಳಿಸಲಾದ ವೇದಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಲೋಧಾ ಅವರನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ಚಂದ್ರ ಪವಾರ್) ವಕ್ತಾರ ಮಹೇಶ್ ತಪಸೆ ಟೀಕಿಸಿದ್ದಾರೆ.

"ಯಾವುದೇ ಸಚಿವರು, ಎಲ್ಲರಿಗೂ ಸಮಾನ ಅವಕಾಶವನ್ನು ವ್ಯಾಖ್ಯಾನಿಸಲ್ಪಟ್ಟಿರುವ ಸಂವಿಧಾನದ ಅನ್ವಯ ಕೆಲಸ ಮಾಡಬೇಕು. ಒಮ್ಮೆ ಸಚಿವರು ಕೋಮು ಪ್ರಚೋದನೆ ನೀಡುವ ಉದ್ಯೋಗ ಪೋರ್ಟಲ್ ಅನ್ನು ಅನುಮೋದಿಸಿದರೆ, ಅವರು ಹೇಗೆ ಸಂವಿಧಾನದ ಅನ್ವಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಹುಟ್ಟುತ್ತದೆ," ಎಂದು ಮಹೇಶ್ ತಪಸೆ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News