×
Ad

ವಿಧಾನಸಭೆಯಲ್ಲಿ ರಮ್ಮಿ ಆಡಿ ಕೃಷಿ ಖಾತೆ ಕಳೆದುಕೊಂಡ ಮಹಾರಾಷ್ಟ್ರ ಸಚಿವ

Update: 2025-08-01 08:08 IST

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್ನಲ್ಲಿ ರಮ್ಮಿ ಆಡುತ್ತಿದ್ದ ಮಾಣಿಕ್ರಾವ್ ಕೊಕಾಟೆ ಕೃಷಿ ಖಾತೆಯನ್ನು ಕಳೆದುಕೊಂಡಿದ್ದಾರೆ. ಕಳಂಕಿತ ಸಚಿವನ ವಿರುದ್ಧ ಎನ್ಸಿಪಿ ಮುಖ್ಯಸ್ಥ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೊನೆಗೂ ಕ್ರಮ ಕೈಗೊಂಡು ಕೃಷಿ ಸಚಿವರಿಗೆ ಹಿಂಬಡ್ತಿ ನೀಡಿದ್ದಾರೆ.

ಕೊಕಾಟೆ ನಿರ್ವಹಿಸುತ್ತಿದ್ದ ಕೃಷಿ ಖಾತೆಯನ್ನು ಎನ್ಸಿಪಿ ಸಚಿವ ದತ್ತಾತ್ರೇಯ ಭರ್ನೆ ಅವರಿಗೆ ವಹಿಸಲಾಗಿದೆ. ಭರ್ನೆಯವರ ಕ್ರೀಡೆ, ಯುವಜನ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ವಕ್ಫ್ ಖಾತೆ ಕೊಕಾಟೆಗೆ ಲಭ್ಯವಾಗಿದೆ. ಘಟನೆ ಬಗ್ಗೆ ಕೊಕಾಟೆ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ಮತ್ತು ಮುಂದೆ ಇಂಥ ಘಟನೆಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಮುಂದುವರಿಯಲು ಪವಾರ್ ಸಮ್ಮತಿ ಸೂಚಿಸಿದರು ಎಂದು ಪಕ್ಷದ ಮೂಲಗಳು ಹೇಳಿವೆ.

ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಕೊಕಾಟೆಗೆ ಹಲವು ಬಾರಿ ಪವಾರ್ ಎಚ್ಚರಿಕೆಯನ್ನೂ ನೀಡಿದ್ದರು. ಕೊಕಾಟೆಯವರ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆಗುವ ಹಾನಿಯಿಂದ ರಕ್ಷಿಸಲು ಕೊಕಾಟೆ ವಿರುದ್ಧ ಕ್ರಮಕ್ಕೆ ಸಿಎಂ ದೇವೇಂದ್ರ ಫಡ್ನವೀಸ್ ಆಗ್ರಹಿಸಿದ್ದರು ಎಂದು ಸರ್ಕಾರಿ ಮೂಲಗಳು ಹೇಳಿವೆ.

ಅಂತಿಮವಾಗಿ ಕೊಕಾಟೆಯವರಿಂದ ಪ್ರಮುಖ ಕೃಷಿ ಖಾತೆಯನ್ನು ಕಿತ್ತು ಪ್ರಮುಖವಲ್ಲದ ಯುವಜನ ಸೇವೆ ಮತ್ತು ಕ್ರೀಡಾಖಾತೆಯನ್ನು ನೀಡಿದ್ದಾರೆ ಎನ್ನಲಾಗಿದೆ. "ಕೊಕಾಟೆ ರಾಜೀನಾಮೆ ನೀಡುವಂತೆ ಮಂಗಳವಾರ ಸೂಚಿಸಿಲ್ಲವಾದರೂ, ಅವರ ರಾಜೀನಾಮೆ ಪಡೆಯುವಂತೆ ಅಥವಾ ಕನಿಷ್ಠ ಕೃಷಿ ಖಾತೆಯನ್ನು ಕಿತ್ತುಕೊಳ್ಳುವಂತೆ ಪಕ್ಷದಲ್ಲೇ ಒತ್ತಡ ಇತ್ತು" ಎಂದು ಮೂಲಗಳು ಸ್ಪಷ್ಟಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News