ಸಾಮಾಜಿಕ ನ್ಯಾಯ ಮತ್ತು ಬುಡಕಟ್ಟು ಅಭಿವೃದ್ಧಿ ಇಲಾಖೆ ನಿಧಿಯನ್ನು ʼಲಾಡ್ಕಿ ಬಹಿಣʼ ಯೋಜನೆಗೆ ಬಳಸುವುದಕ್ಕೆ ಮಹಾರಾಷ್ಟ್ರ ಸಚಿವ ವಿರೋಧ
ಸಂಜಯ್ ಶಿರ್ಸತ್ | Credit: X/@SanjayShirsat77
ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದಲ್ಲಿ ಅರ್ಹ ಮಹಿಳೆಯರಿಗೆ 1,500 ರೂ.ಗಳನ್ನು ಒದಗಿಸುವ ಪ್ರಮುಖ ʼಲಾಡ್ಕಿ ಬಹಿಣʼ ಯೋಜನೆಗಾಗಿ ಸಾಮಾಜಿಕ ನ್ಯಾಯ ಮತ್ತು ಬುಡಕಟ್ಟು ಅಭಿವೃದ್ಧಿ ಇಲಾಖೆಗಳಿಂದ ಅನುದಾನವನ್ನು ಹಂಚಿಕೆ ಮಾಡಲಾಗುತ್ತದೆ ಎನ್ನುವ ವಿಚಾರ ತಿಳಿದು ಅಸಮಾಧಾನಗೊಂಡಿರುವ ಸಚಿವ ಸಂಜಯ್ ಶಿರ್ಸತ್, ತಾಳ್ಮೆಗೂ ಮಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವರದಿಗಾರರೊಂದಿಗೆ ಮಾತನಾಡಿದ ಸಚಿವ ಶಿರ್ಸತ್, ನಮ್ಮ ಇಲಾಖೆಯಿಂದ ಸುಮಾರು 425 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಧ್ಯಮಗಳ ಮೂಲಕ ತಿಳಿದುಕೊಂಡೆ ಎಂದು ಹೇಳಿದರು.
ಇದಕ್ಕೂ ಮೊದಲು, ಸುಮಾರು 7,000 ಕೋಟಿ ರೂ.ಗಳನ್ನು ನೀಡಲಾಗಿದೆ. ಸಾಮಾಜಿಕ ನ್ಯಾಯ ಇಲಾಖೆಯ ಅಗತ್ಯವಿಲ್ಲದಿದ್ದರೆ, ಅಥವಾ ಅದಕ್ಕಾಗಿ ಅನುದಾನ ಖರ್ಚು ಮಾಡುವುದು ಬೇಡವಾಗಿದ್ದರೆ, ನಮಗೆ ಈ ಇಲಾಖೆ ಏಕೆ ಬೇಕು? ಅದನ್ನು ಮುಚ್ಚಬಹುದು. ಇದು ದಲಿತರು ಮತ್ತು ಸಮಾಜದ ಹಿಂದುಳಿದ ವರ್ಗಗಳಿಗೆ ಇರುವ ಇಲಾಖೆ. ಇರುವ ಅನುದಾನವೇ ಇಲಾಖೆಗೆ ಕೊರತೆಯಾಗುತ್ತಿದೆ. ಈ ಇಲಾಖೆಯಿಂದ ಅನುದಾನವನ್ನು ಬೇರೆಡೆಗೆ ಹಂಚಿಕೆ ಮಾಡಲು ಸಾಧ್ಯವಿಲ್ಲ. ಸರ್ಕಾರವು ಅನುದಾನ ಒದಗಿಸಬೇಕು. ನಾನು ಈ ವಿಷಯವನ್ನು ಮುಖ್ಯಮಂತ್ರಿಯೊಂದಿಗೆ ಪ್ರಸ್ತಾಪಿಸುತ್ತೇನೆ, ಎಂದು ಅವರು ಹೇಳಿದರು.
"ಇದನ್ನು ಅನ್ಯಾಯ ಅಥವಾ ಇನ್ನೇನೋ ಎಂದು ಕರೆಯಿರಿ. ಈ ಇಲಾಖೆಯ ಅನುದಾನವನ್ನು ಬೇರೆಡೆಗೆ ನೀಡುವುದು ಕಾನೂನು ಚೌಕಟ್ಟಿನೊಳಗೆ ಇಲ್ಲದ ಕಾರಣ ನಾನು ಈ ವಿಷಯವನ್ನು ಮುಖ್ಯಮಂತ್ರಿಯೊಂದಿಗೆ ಪ್ರಸ್ತಾಪಿಸುತ್ತೇನೆ. ಹಣಕಾಸು ಇಲಾಖೆಯ ಸಿಬ್ಬಂದಿ ಅನುದಾನವನ್ನು ಬೇರೆಡೆಗೆ ಹಂಚಿಕೆ ಮಾಡುವುದು ಕಾನೂನು ಚೌಕಟ್ಟಿನೊಳಗೆ ಇದೆ ಎಂದು ತೋರಿಸುತ್ತಿದ್ದಾರೆ. ಇದು ತಪ್ಪು. ನಾನು ಅದನ್ನು ಬಲವಾಗಿ ವಿರೋಧಿಸುತ್ತೇನೆ," ಎಂದು ಸಂಜಯ್ ಶಿರ್ಸತ್ ಅರ್ಪಿಸಿದರು.
ಕಾನೂನಿನ ಮೂಲಕ ತಮ್ಮ ಇಲಾಖೆಗಳಿಗೆ ನಿಗದಿಪಡಿಸಿದ ಹಣವನ್ನು ಬೇರೆಡೆಗೆ ಹಂಚಿಕೆ ಮಾಡಲಾಗುವುದಿಲ್ಲ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ ಇಲಾಖೆಯಿಂದ 410.3 ಕೋಟಿ ರೂ.ಗಳನ್ನು ಮತ್ತು ಬುಡಕಟ್ಟು ಅಭಿವೃದ್ಧಿ ಇಲಾಖೆಯಿಂದ 335.7 ಕೋಟಿ ರೂ.ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಂಚಿಕೆ ಮಾಡುವ ನಿರ್ಣಯವನ್ನು ಹೊರಡಿಸಿದೆ. ಇದು ರಾಜ್ಯದಾದ್ಯಂತ ಸುಮಾರು ಒಂದು ಕೋಟಿ ಮಹಿಳೆಯರಿಗೆ ಸಹಾಯವಾಗಲಿದೆ ಎಂದು ಹೇಳಲಾಗುತ್ತದೆ.