×
Ad

ಮಹಾರಾಷ್ಟ್ರ: ಹುಲಿ ಮರಿ ನಾಮಕರಣದಲ್ಲೂ ರಾಜಕೀಯ!

Update: 2023-09-18 09:46 IST

Photo: Twitter.com/CMOMaharashtra

ಮುಂಬೈ: ಮೂರು ಹುಲಿ ಮರಿಗಳ ನಾಮಕರಣ ಸಮಾರಂಭದಲ್ಲಿ 'ಆದಿತ್ಯ' ಎಂಬ ಹೆಸರಿನ ಬದಲಾಗಿ ಬೇರೆ ಹೆಸರನ್ನು ಹುಲಿ ಮರಿಯೊಂದಕ್ಕೆ ಇಟ್ಟ ಘಟನೆ ಮಹಾರಾಷ್ಟ್ರದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಹುಲಿಮರಿಗೆ ಮೊದಲು ಇಡಲು ಉದ್ದೇಶಿಸಿದ್ದ 'ಆದಿತ್ಯ' ಹೆಸರು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಂಪುಟದಲ್ಲಿ ಸಚಿವರಾಗಿದ್ದ ಆದಿತ್ಯ ಠಾಕ್ರೆಯವರಿಗೆ ಸಂಬಂಧಿಸಿದ್ದು ಎನ್ನುವುದು ವಿರೋಧ ಪಕ್ಷಗಳ ವಾದ.

ಛತ್ರಪತಿ ಸಂಭಾಜಿನಗರದಲ್ಲಿ ಎರಡು ಗಂಡು ಹುಲಿಮರಿಗಳು ಹಾಗೂ ಒಂದು ಹೆಣ್ಣು ಹುಲಿಮರಿಗೆ ನಾಮಕರಣ ಮಾಡುವ ಸಮಾರಂಭಕ್ಕೆ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಅರಣ್ಯ ಖಾತೆ ಸಚಿವ ಸುಧೀರ್ ಮುಂಗಂಟಿವಾರ್ ಅವರನ್ನು ಆಹ್ವಾಸಲಾಗಿದ್ದು, ಈ ಸಮಾರಂಭ ವಿವಾದದ ಕೇಂದ್ರಬಿಂದು ಎನಿಸಿದೆ.

ಸಮಾರಂಭದಲ್ಲಿ ಮುಖ್ಯಮಂತ್ರಿ ಗಾಜಿನ ಬೌಲ್ ಒಂದರಿಂದ ಚೀಟಿಯೊಂದನ್ನು ಎತ್ತಿದರು. ಅದನ್ನು ನೋಡಿದ ಅಜಿತ್ ಪವಾರ್ ಅವರು, ಬೇರೆ ಚೀಟಿ ಎತ್ತುವಂತೆ ಮನವಿ ಮಾಡಿರುವುದು ಸಮಾರಂಭದ ದೃಶ್ಯಾವಳಿಯಿಂದ ತಿಳಿದುಬರುತ್ತದೆ. ಪವಾರ್ ನಸುನಗುತ್ತಾ ಚೀಟಿಯನ್ನು ಬೇರೆಯವರಿಗೆ ತೋರಿಸಿದ್ದಾರೆ. ಇದು ಆದಿತ್ಯ ಎನ್ನುವ ಹೆಸರು. ಈ ಕಾರಣಕ್ಕಾಗಿ ಬೇರೆ ಚೀಟಿ ಎತ್ತುವಂತೆ ಕೋರಿದ್ದಾಗಿ ಪವಾರ್ ಹೇಳುತ್ತಿರುವ ಧ್ವನಿ ಕೇಳಿಬರುತ್ತಿದೆ.

ಪವಾರ್ ವಿಕ್ರಂ ಹೆಸರಿನ ಮತ್ತೊಂದು ಚೀಟಿಯನ್ನು ಎತ್ತಿದ್ದು, ಇದನ್ನು ಓದಲಾಯಿತು. ಅಂತಿಮವಾಗಿ ಹುಲಿಮರಿಗಳಿಗೆ ಶ್ರಾವಣಿ, ವಿಕ್ರಮ್ ಮತ್ತು ಕನ್ಹಾ ಎಂಬ ಹೆಸರು ಇಡಲಾಯಿತು. ಆದಿತ್ಯ ಹೆಸರಿನ ಚೀಟಿಯನ್ನು ಎತ್ತಿ ಆ ಬಳಿಕ ಬದಲಿಸಿದ ನಿರ್ಧಾರ, ವಿರೋಧ ಪಕ್ಷಗಳಿಗೆ ಶಿಂಧೆ ಸರ್ಕಾರದ ವಿರುದ್ಧದ ಅಸ್ತ್ರವಾಗಿ ಮಾರ್ಪಟ್ಟಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹಾಗೂ ಶಿವಸೇನೆ (ಯುಬಿಟಿ) ಮುಖಂಡ ಅಂಬಾದಾಸ್ ದಾನ್ವೆ, "ಈ ಜಗತ್ತಿನಿಂದ ಅಥವಾ ಆಕಾಶದಿಂದ ಆದಿತ್ಯನನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಈ ಸರ್ಕಾರಕ್ಕೆ ಈ ಹೆಸರಿನ ಬಗ್ಗೆಯೂ ಭೀತಿ ಇದೆ" ಎಂದು ಛೇಡಿಸಿದ್ದಾರೆ. ಆದರೆ ಇದನ್ನು ಸಿಎಂ ಶಿಂಧೆ ನಿರಾಕರಿಸಿದ್ದು, ಎರಡು ಚೀಟಿಗಳನ್ನು ಏಕಕಾಲಕ್ಕೆ ಎತ್ತಲಾಗಿತ್ತು. ಆದ್ದರಿಂದ ಒಂದು ಚೀಟಿಯನ್ನು ಪಕ್ಕಕ್ಕೆ ಇಡಲಾಯಿತು. ಇದಕ್ಕಿಂತ ಹೆಚ್ಚಿನದೇನೂ ಇಲ್ಲ ಎಂದು ಸಬೂಬು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News