×
Ad

ನಾಣ್ಣುಡಿಗಳು ಮೂರ್ಖರಿಗೆ ಸೂಕ್ತವಲ್ಲ: ತಮ್ಮ ವಿರುದ್ಧ ಛತ್ತೀಸ್‌ಗಢದಲ್ಲಿ ಎಫ್‌ಐಆರ್‌ ದಾಖಲಿಸಿದ್ದಕ್ಕೆ ಮಹುವಾ ಮೊಯಿತ್ರಾ ಆಕ್ರೋಶ

"Google translate ಬಳಸಿಕೊಂಡು ಪ್ರಕರಣ ದಾಖಲಿಸಿದರೆ ಹೀಗೆ ಆಗುತ್ತದೆ" ಎಂದು ವ್ಯಂಗ್ಯವಾಡಿದ ಸಂಸದೆ

Update: 2025-08-31 23:57 IST

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (PTI)

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಛತ್ತೀಸ್‌ ಗಢದಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಂದರ್ಭಿಕವಾಗಿ ಬಳಸಿದ್ದ ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅವು ಕೇವಲ ಭಾಷಾ ವೈಶಿಷ್ಟ್ಯದ ರೂಪಕಗಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಯ್‌ಪುರದ ಮಾನಾ ಪೊಲೀಸ್ ಠಾಣೆಯಲ್ಲಿ, ಸ್ಥಳೀಯ ನಿವಾಸಿಯೊಬ್ಬರ ದೂರಿನ ಆಧಾರವಾಗಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 196 ಮತ್ತು 197 ಅಡಿಯಲ್ಲಿ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರುದಾರರ ಪ್ರಕಾರ, ಮೊಯಿತ್ರಾ ಅವರು ಅಮಿತ್ ಶಾ ಬಗ್ಗೆ ಮಾಡಿದ ಹೇಳಿಕೆಗಳು ಆಕ್ಷೇಪಾರ್ಹವಾಗಿದ್ದು, ರಾಷ್ಟ್ರೀಯ ಏಕತೆಗೆ ಹಾನಿಕಾರಕ. ವರದಿಗಳ ಪ್ರಕಾರ, ಮೊಯಿತ್ರಾ ಶಾ ಬಾಂಗ್ಲಾದೇಶದಿಂದ ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ವಿಫಲವಾದರೆ, ಅವರ "ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು" ಎಂದು ಹೇಳಿದ್ದರು ಎಂದು ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿರುವ ವೀಡಿಯೋ ಸಂದೇಶದಲ್ಲಿ, ಮಹುವಾ ಮೊಯಿತ್ರಾ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

"ನನ್ನ ಮಾತುಗಳನ್ನು ಅಕ್ಷರಶಃ ಹಾಗೆಯೇ ಅರ್ಥೈಸಿಕೊಳ್ಳಬೇಡಿ. ಇವು ಕೇವಲ ಭಾಷೆಯ ರೂಪಕಗಳು. ಇಂಗ್ಲಿಷ್‌ನಲ್ಲಿ ನಾವು 'Heads will roll' ಎಂದು ಹೇಳುತ್ತೇವೆ, ಅಂದರೆ ಯಾರ ತಲೆಯನ್ನು ನಿಜವಾಗಿಯೂ ಕತ್ತರಿಸಲಾಗುವುದು ಎಂದರ್ಥವಲ್ಲ. ಅದರರ್ಥ, ಯಾರಾದರೂ ಹೊಣೆ ಹೊರುವ ಸಮಯ ಬಂದಿದೆ ಎಂಬುದಷ್ಟೆ. ಬಂಗಾಳಿಯಲ್ಲಿ ನಾವು 'ಮಾಥಾ ಕಟಾ ಜಾವಾ' ಎಂದು ಹೇಳುತ್ತೇವೆ, ಅಂದರೆ 'ನಾಚಿಕೆಯಿಂದ ತಲೆ ತಗ್ಗಿಸುವುದು' ಎನ್ನುವುದಕ್ಕೆ ಸಮಾನವಾದ ಪದ ಅದು, ಹಿಂಸೆಗೆ ಕರೆ ನೀಡುವುದಲ್ಲ," ಎಂದು ಅವರು ವಿವರಿಸಿದ್ದಾರೆ.

ಎಫ್‌ಐಆರ್‌ ಕುರಿತು ಪ್ರಶ್ನಿಸುತ್ತಾ, ಮೊಯಿತ್ರಾ ಛತ್ತೀಸ್‌ಗಢ ಪೊಲೀಸರನ್ನೂ ಟೀಕಿಸಿದ್ದಾರೆ. "ಎಫ್‌ಐಆರ್‌ನಲ್ಲಿ 'ಮಹುವಾ ಮೊಯಿತ್ರಾ ನೆ ಕಹಾ ಗಲಾ ಕಾತ್ ದಿಯಾ' ಎಂದು ಉಲ್ಲೇಖಿಸಲಾಗಿದೆ. ಆದರೆ ನಾನು 'ಮಾಥಾ ಕೇಟೆ ಟೇಬಲ್' ಎಂದಿದ್ದೆ. ಎರಡು ಅರ್ಥಗಳ ನಡುವೆ ಆಕಾಶ-ಭೂಮಿ ಅಂತರವಿದೆ. Google ಅನುವಾದವನ್ನು ಬಳಸಿಕೊಂಡು ಪ್ರಕರಣ ದಾಖಲಿಸಿದರೆ ಹೀಗೆ ಆಗುತ್ತದೆ," ಎಂದು ವ್ಯಂಗ್ಯವಾಡಿದ್ದಾರೆ.

ಇದಲ್ಲದೆ, ಮೊಯಿತ್ರಾ ಕಳೆದ ಜುಲೈನಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಕೊಂಡಗಾಂವ್ ಜಿಲ್ಲೆಯ 12 ವಲಸೆ ಬಂಗಾಳಿ ಕಾರ್ಮಿಕರನ್ನು ಅಕ್ರಮವಾಗಿ ಬಂಧಿಸಿ, ಸೆಕ್ಷನ್ 128 ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ, ಥಳಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸದೇ ಇಟ್ಟಿದ್ದರು. ನಾನು ನ್ಯಾಯಾಲಯದ ಕದ ತಟ್ಟಿದ ನಂತರ ಛತ್ತೀಸ್‌ಗಢ ಪೊಲೀಸರಿಗೆ ಹೈಕೋರ್ಟ್‌ನಿಂದ ತಪರಾಕಿ ಬಿದ್ದಿತ್ತು. ಅಂತಿಮವಾಗಿ ಹೈಕೋರ್ಟ್ ನೋಟಿಸ್ ನೀಡಿದ ನಂತರ ಕಾರ್ಮಿಕರ ಮೇಲಿನ ಎಫ್‌ಐಆರ್ ಹಿಂತೆಗೆದುಕೊಳ್ಳಲಾಯಿತು. ಈಗ ನನ್ನ ಮೇಲೂ ಅದೇ ಮಾದರಿಯನ್ನು ಪುನರಾವರ್ತಿಸುತ್ತಿದ್ದಾರೆ," ಎಂದು ಅವರು ಕಿಡಿಕಾರಿದ್ದಾರೆ.

"ನಾಣ್ಣುಡಿಗಳು ಮೂರ್ಖರಿಗೆ ಅಲ್ಲ. ನನ್ನ ಪ್ರತಿಕ್ರಿಯೆ ಕೇಳುವವರಿಗೆ ಇಲ್ಲಿದೆ, ಪ್ರತಿಕ್ರಿಯೆ. @CG_Police, ನಿಮ್ಮ ಹಿಂದಿನ ಸುಳ್ಳು ಪ್ರಕರಣದ ಕುರಿತಾಗಿ ಹೈಕೋರ್ಟ್‌ನಿಂದ ನಿಮಗೆ ಮಂಗಳಾರತಿಯಾಗಿದೆ. ಬಿಜೆಪಿ ಮಾಸ್ಟರ್ಸ್‌ಗಳ ಸೂಚನೆಗಳನ್ನು ಅಂಧವಾಗಿ ಅನುಸರಿಸುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ನಿಮ್ಮ ಮುಖದ ಮೇಲೆ ಮೊಟ್ಟೆ ಮೊಟ್ಟೆ ಎಸೆಯುತ್ತಾರೆ," ಎಂದು ಮಹುವಾ ಮೊಯಿತ್ರಾ ತಮ್ಮ ಎಕ್ಸ್ ಖಾತೆಯಲ್ಲಿನ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

ಗೃಹ ಸಚಿವರ ವಿರುದ್ಧ ಹೊಣೆಗಾರಿಕೆ ಒತ್ತಾಯಿಸುವುದು ರಾಷ್ಟ್ರೀಯ ಏಕತೆಗೆ ಹೇಗೆ ಹಾನಿಕಾರಕ ಎಂಬುದನ್ನು ಪ್ರಶ್ನಿಸಿದ ಮಹುವಾ ಮೊಯಿತ್ರಾ, "ನೀವು ಈ ರೀತಿಯ ನಕಲಿ ಎಫ್‌ಐಆರ್‌ಗಳನ್ನು ದಾಖಲಿಸಿದಾಗ, ಅದು ನನ್ನನ್ನು ರಾಜಕೀಯವಾಗಿ ಇನ್ನಷ್ಟು ಬಲಪಡಿಸುತ್ತದೆ. ಸಂಸತ್ತಿನಿಂದ ನನ್ನನ್ನು ಹೊರಹಾಕಿದ್ದರು, ನಾನು ಹಿಂತಿರುಗಿದ್ದೇನೆ. ಪ್ರತೀ ಬಾರಿ ನನ್ನ ವಿರುದ್ಧ ಹೋರಾಡಲು ಯತ್ನಿಸಿದಾಗ, ನಾನು ಮತ್ತಷ್ಟು ಬಲಶಾಲಿಯಾಗುತ್ತೇನೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ವಿರುದ್ಧ ದಾಖಲಾಗುತ್ತಿರುವ ಪ್ರಕರಣಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ನಿಮ್ಮ ಎಫ್‌ಐಆರ್‌ ಗಳನ್ನು ತೆಗೆದುಕೊಂಡು, ಅವುಗಳನ್ನು ಸೂರ್ಯ ಬೆಳಗದ ಸ್ಥಳದಲ್ಲಿ ಇಡಿ. ಶೀಘ್ರದಲ್ಲೇ ಉತ್ತಮ ಪ್ರಜ್ಞೆಯು ಮೇಲುಗೈ ಸಾಧಿಸುತ್ತದೆ," ಎಂದು ತಿರುಗೇಟು ನೀಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News