ಅಸ್ಸಾಮಿನ ಪ್ರಮುಖ ಸೇತುವೆ ಕುಸಿತ
Update: 2025-06-18 20:52 IST
PC : ANI
ಸಿಲ್ಚಾರ್: ಹೊಸದಾಗಿ ದುರಸ್ತಿ ಮಾಡಲಾಗಿದ್ದ ಅಸ್ಸಾಮಿನ ಕಾಚಾರ್ ಜಿಲ್ಲೆಯ ಸೇತುವೆಯೊಂದು ಬುಧವಾರ ಕುಸಿದುಬಿದ್ದಿದ್ದು,ಅತಿಯಾಗಿ ಸರಕು ತುಂಬಿದ್ದ ಎರಡು ಟ್ರಕ್‌ಗಳು ಹರಂಗ್ ನದಿಯಲ್ಲಿ ಬಿದ್ದಿವೆ. ಅವುಗಳ ಚಾಲಕರು ಗಾಯಗೊಂಡಿದ್ದಾರೆ.
ಅಸ್ಸಾಮನ್ನು ಮೇಘಾಲಯದೊಂದಿಗೆ ಸಂಪರ್ಕಿಸುವ ಸಿಲ್ಚಾರ್-ಕಲೈನ್ ರಸ್ತೆಯಲ್ಲಿರುವ ದಶಕಗಳಷ್ಟು ಹಳೆಯದಾದ ಸೇತುವೆಯನ್ನು ಎರಡು ವರ್ಷಗಳ ದುರಸ್ತಿ ಕಾಮಗಾರಿಗಳ ಬಳಿಕ ಕಳೆದ ತಿಂಗಳಷ್ಟೇ ವಾಹನ ಸಂಚಾರಕ್ಕೆ ಮತ್ತೆ ಮುಕ್ತಗೊಳಿಸಲಾಗಿತ್ತು.
ಘಟನೆಯ ಕುರಿತು ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ಮೃದುಲ್ ಯಾದವ ಅವರು,ಸಂಚಾರಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು ಮತ್ತು ಅತಿಯಾದ ಸರಕು ತುಂಬಿದ ಲಾರಿಗಳ ಮೇಲೆ ನಿಗಾಯಿರಿಸಲು ನಾಲ್ಕು ಚೆಕ್‌ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿತ್ತು ಎಂದು ಹೇಳಿದರು.