×
Ad

ಛತ್ತೀಸ್‌ಗಢ | ಮತಾಂತರ ಆರೋಪದಲ್ಲಿ ಕೇರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರ ಬಂಧನ

Update: 2025-07-27 21:00 IST

Photo | maktoobmedia

ರಾಯ್ಪುರ : ಬಲವಂತದ ಧಾರ್ಮಿಕ ಮತಾಂತರ ಆರೋಪದಲ್ಲಿ ಛತ್ತೀಸ್‌ಗಢ ಪೊಲೀಸರು ಪ್ರೀತಾ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಎಂಬ ಇಬ್ಬರು ಮಲಯಾಳಿ ಕ್ಯಾಥೋಲಿಕ್ ಸನ್ಯಾಸಿನಿಯರನ್ನು ಬಂಧಿಸಿದ್ದಾರೆ.

ರಾಯ್ಪುರದ ದುರ್ಗ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕೇರಳದ ಚೆರ್ತಲಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಿರೋ-ಮಲಬಾರ್ ಚರ್ಚ್‌ನ ಅಸ್ಸಿಸಿ ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್(ASMI) ಸದಸ್ಯರಾದ ಸಿಸ್ಟರ್ ವಂದನಾ ಮತ್ತು ಪ್ರೀತಾ ಬಂಧಿತರು.

ಆಗ್ರಾದ ಫಾತಿಮಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕ್ರೈಸ್ತ ಸನ್ಯಾಸಿನಿಯರು ಮೂವರು ಯುವತಿಯರೊಂದಿಗೆ ಛತ್ತೀಸ್‌ಗಢಕ್ಕೆ ತೆರಳುತ್ತಿದ್ದರು. ರೈಲ್ವೆ ಟಿಕೆಟ್ ಪರೀಕ್ಷಕ ಇವರನ್ನು ವಿಚಾರಿಸಿ ಬಳಿಕ ಬಜರಂಗದಳದ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ಇವರು ಮತಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ. ಯುವತಿಯರು ನಾವು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ನಾವು ನಮ್ಮ ಪೋಷಕರ ಒಪ್ಪಿಗೆಯಿಂದ ಪ್ರಯಾಣಿಸಿದ್ದೇವೆ ಎಂದು ಹೇಳಿದ್ದಾರೆ. ಆದರೂ, ಆ ಗುಂಪನ್ನು ಬಲವಂತವಾಗಿ ರೈಲಿನಿಂದ ಇಳಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪೊಲೀಸರು ಇಬ್ಬರು ಸನ್ಯಾಸಿನಿಯರ ವಿರುದ್ಧ ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದ ಆರೋಪಗಳನ್ನು ಹೊರಿಸಿದ್ದಾರೆ. ಯುವತಿಯರಲ್ಲಿ ಓರ್ವಳು ಒಪ್ಪಿಗೆಯಿಲ್ಲದೆ ತನ್ನನ್ನು ಕರೆದೊಯ್ಯಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆಂದು ಹೇಳಲಾಗಿದೆ.

ಕೇರಳದ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೇರಳದಲ್ಲಿ ಅವರು ಚರ್ಚ್ ಮತ್ತು ಕ್ರೈಸ್ತರ ಮನೆಗಳಿಗೆ ಕೇಕ್‌ಗಳೊಂದಿಗೆ ಬರುತ್ತಾರೆ. ಆದರೆ ಬೇರೆಡೆ, ಅವರು ಕ್ರಿಶ್ಚಿಯನ್ ಹಬ್ಬಗಳನ್ನು ಅಡ್ಡಿಪಡಿಸುತ್ತಾರೆ ಮತ್ತು ದಾಳಿಗಳನ್ನು ನಡೆಸುತ್ತಾರೆ. ಬಿಜೆಪಿ ಆಡಳಿತದ ಛತ್ತೀಸ್‌ಗಢದಲ್ಲಿ ನಡೆದ ಘಟನೆಯು ಇದಕ್ಕೆ ನಿದರ್ಶನ. ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ಕಿರುಕುಳ ಸ್ವೀಕಾರಾರ್ಹವಲ್ಲ. ಇಬ್ಬರು ಸನ್ಯಾಸಿನಿಯರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News