ಮಲೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ | ಪಿ.ವಿ.ಸಿಂಧು, ಅಶ್ಮಿತಾ ಚಲಿಹಾ ಕ್ವಾರ್ಟರ್ ಫೈನಲ್ ಗೆ ಲಗ್ಗೆ
ಪಿ.ವಿ. ಸಿಂಧು | PC : NDTV
ಹೊಸದಿಲ್ಲಿ: ಭಾರತದ ಶಟ್ಲರ್ ಹಾಗೂ ಎರಡು ಬಾರಿಯ ಒಲಿಂಪಿಕ್ಸ್ ಮೆಡಲಿಸ್ಟ್ ಪಿ.ವಿ. ಸಿಂಧು ಈಗ ನಡೆಯುತ್ತಿರುವ ಮಲೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಸ್ಪರ್ಧಾವಳಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದರು.
ಗುರುವಾರ ಆಡಿರುವ ತನ್ನ ಎರಡನೇ ಸುತ್ತಿನ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ದಕ್ಷಿಣ ಕೊರಿಯಾದ ವಿಶ್ವದ ನಂ.34ನೇ ಆಟಗಾರ್ತಿ ಸಿಮ್ ಯು ಜಿನ್ ವಿರುದ್ಧ ಕಠಿಣ ಸವಾಲು ಎದುರಿಸಿದರು. 59 ನಿಮಿಷಗಳ ಹೋರಾಟದ ನಂತರ ಸಿಂಧು 21-13, 12-21 ಹಾಗೂ 21-14 ಗೇಮ್ ಗಳ ಅಂತರದಿಂದ ಜಯಶಾಲಿಯಾದರು.
ಸಿಂಧು ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ ನಂ.6ನೇ ಆಟಗಾರ್ತಿ ಹಾನ್ ಯುಇ ಅವರನ್ನು ಎದುರಿಸಲಿದ್ದಾರೆ.
ವಿಶ್ವದ 53ನೇ ರ್ಯಾಂಕಿನ ಅಶ್ಮಿತಾ ಚಲಿಹಾ 43 ನಿಮಿಷಗಳ ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಅಮೆರಿಕದ 10ನೇ ರ್ಯಾಂಕಿನ ಬೆವೆನ್ ಝಾಂಗ್ರನ್ನು 21-19, 16-21 ಹಾಗೂ 21-12 ಗೇಮ್ ಗಳ ಅಂತರದಿಂದ ಸೋಲಿಸಿದ್ದಾರೆ.
ಭಾರತೀಯ ಮಹಿಳೆಯರ ಡಬಲ್ಸ್ ತಂಡಗಳು ನಿರಾಶಾದಾಯಕ ಪ್ರದರ್ಶನ ನೀಡಿದವು.
37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಮ್ರಾನ್ ಸಿಂಘಿ ಹಾಗೂ ರಿತಿಕಾ ಥಾಕೆರ್ ಮಲೇಶ್ಯದ ಜೋಡಿ ಪೀರ್ಲಿ ಟಾನ್ ಹಾಗೂ ಥಿನ್ಹಾ ಮುರಳೀಧರನ್ ವಿರುದ್ಧ 17-21, 11-21 ಅಂತರದಿಂದ ಸೋತಿದ್ದಾರೆ.
ಅದೇ ರೀತಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಚೈನೀಸ್ ತೈಪೆಯ ಜೋಡಿ ಯು ಚಿಯೆನ್ ಹು ಹಾಗೂ ಸಂಗ್ ಶುವೊ ಯುನ್ ವಿರುದ್ಧ 18-21, 22-20, 14-21 ಅಂತರದಿಂದ ಸೋತಿದ್ದಾರೆ.
ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(ಬಿಡಬ್ಲ್ಯುಎಫ್) ವರ್ಲ್ಡ್ ಟೂರ್ ಸೂಪರ್ 500 ಮಟ್ಟದ ಟೂರ್ನಮೆಂಟ್ ಮಲೇಶ್ಯ ಮಾಸ್ಟರ್ಸ್ ಮಲೇಶ್ಯದ ಕೌಲಾಲಂಪುರದಲ್ಲಿ ಮೇ 21ರಿಂದ 26ರ ತನಕ ನಡೆಯಲಿದೆ.
ಪಿ.ವಿ. ಸಿಂಧು ಈ ಹಿಂದೆ 2013 ಹಾಗೂ 2016ರಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು. ಸೈನಾ ನೆಹ್ವಾಲ್ 2017ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಕಳೆದ ವರ್ಷ ಎಚ್.ಎಸ್.ಪ್ರಣಯ್ ಫೈನಲ್ ನಲ್ಲಿ ಚೀನಾದ ವೆಂಗ್ ಹಾಂಗ್ಯಾಂಗ್ರನ್ನು 21-19, 13-21, 21-18 ಗೇಮ್ ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಜಯಿಸಿದ್ದರು.